ಉಡುಪಿ, ಆ. 10 : ಶಿರ್ವ-ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪೊಲೀಸ್ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವರದಿ ಪ್ರಕಾರ,ಆರೋಪಿ ಉತ್ತರಖಾಂಡದ ಅಜಯ್ ರಸ್ತೋಗಿ ಯಾನೆ ಅನ್ಮೋಲ್(23) ಎಂಬಾತನನ್ನು ಕುಮಟಾದಲ್ಲಿ, ಬಿಹಾರದ ಜಿಯಾಹುಲ್ ವಜೂಲ್ ಶೇಖ್ ಯಾನೆ ದೀಪಕ್(38) ಎಂಬಾತನನ್ನು ಭಟ್ಕಳದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಮೊದಲು ಉತ್ತರ ಪ್ರದೇಶ ಥಾಣಾ ಪಿಲ್ವದ ರಾಜು(42) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆ. 7ರಂದು ಮಧ್ಯಾಹ್ನ ಕಾಪು ತಾಲ್ಲೂಕಿನ ಮುದರಂಗಡಿಯ ಸೆಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್ ಕಚೇರಿಗೆ ಬಂದಿದ್ದ ಡೇವಿಡ್ ಡಿಸೋಜಾ ಅವರು, ಬಳಿಕ ತನ್ನ ಥಾರ್ ವಾಹನದತ್ತ ತೆರಳಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಆರೋಪಿಗಳು ಡೇವಿಡ್ ಡಿಸೋಜಾ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಬಳಿಕ ಗಂಭೀರವಾಗಿ ಗಾಯಗೊಂಡ ಡೇವಿಡ್ ಡಿಸೋಜಾ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಈ ಕೃತ್ಯಕ್ಕೆ ಮೃತ ಡೇವಿಡ್ ಡಿಸೋಜಾ ಅವರು ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಡೇವಿಡ್ ಅವರನ್ನು ಕೊಲೆ ಮಾಡಲು ಸುಫಾರಿ ನೀಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಕೃತ್ಯಕ್ಕೆ ಸಹಕರಿಸಿದ, ಹಣಕಾಸಿನ ನೆರವನ್ನು ನೀಡಿದ ಮತ್ತು ಆರೋಪಿತರಿಗೆ ಆಶ್ರಯ ನೀಡಿದವರ ಕುರಿತು ತನಿಖೆ ಮುಂದುವರೆದಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 66/2026 ಕಲಂ:103, 3(5),ಬಿಎನ್‌ಎಸ್ & 3, 25 ಆರ್ಮ್ ಆಕ್ಟ್ ( Arms act ) ರಂತೆ ಪ್ರಕರಣ ದಾಖಲಾಗಿತ್ತು.











