ಮಂಗಳೂರು, ಸೆ.10 : ಅಡಿಕೆ ಮಾರುಕಟ್ಟೆಯ ಏರಿಳಿತ ಹಾಗೂ ಕೊಕ್ಕೊ ವಲಯದ ಸವಾಲುಗಳ ನಡುವೆಯೂ ಕ್ಯಾಂಪ್ಕೊಸಂಸ್ಥೆಯು 2025-26ನೇ ಸಾಲಿನಲ್ಲಿ 3,735 ಕೋಟಿ ರೂ. ಒಟ್ಟು ದಾಖಲೆಯ ವ್ಯವಹಾರ ವಹಿವಾಟು ಮತ್ತು 49.62 ಕೋಟಿ ರೂ. ತೆರಿಗೆಪೂರ್ವ ಲಾಭ ದಾಖಲಿಸಿದೆ. 2025-26ನೇ ಸಾಲಿಗೆ ಸದಸ್ಯರಿಗೆ ಶೇ. 14ರಷ್ಟು ಡಿವಿಡೆಂಡ್ ನೀಡಲು ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ ಎಂದು ಅಧ್ಯಕ್ಷ ಸತೀಶ್ ಚಂದ್ರ ಎಸ್ ಆರ್ ಅವರು ನಗರದ ಕ್ಯಾಂಪ್ಕೊ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರ್ಥಿಕ ವರ್ಷದಲ್ಲಿ ಕ್ಯಾಂಪ್ಕೊ 2,924.32 ಕೋಟಿ ರೂ. ಮೌಲ್ಯದ 58,742.76 ಮೆ.ಟನ್ ಅಡಿಕೆ ಖರೀದಿಸಿದ್ದು, 2,985.19 ಕೋಟಿ ರೂ. ಮೌಲ್ಯದ 59,088.64 ಮೆ.ಟನ್ ಅಡಿಕೆ ಮಾರಾಟ ಮಾಡಿದೆ ಎಂದರು.
ಆಮದು ಅಡಿಕೆಯಿಂದ ದೇಶೀಯ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಹಾಗೂ ಆಮದು ಅಡಿಕೆಯನ್ನು ದೇಶೀಯ ಉತ್ಪನ್ನದೊಂದಿಗೆ ಮಿಶ್ರಣ ಮಾಡುವ ಪ್ರಕರಣಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.
ಆರ್ಥಿಕ ವರ್ಷದಲ್ಲಿ ಕ್ಯಾಂಪ್ಕೊ 27.96 ಕೋಟಿ ರೂ. ಮೌಲ್ಯದ 2,351.18 ಮೆ.ಟನ್ ಹಸಿ ಕೊಕ್ಕೊ ಬೀಜ ಮತ್ತು 185.52 ಕೋಟಿ ರೂ. ಮೌಲ್ಯದ 4,021.85 ಮೆ.ಟನ್ ಒಣ ಬೀಜ ಖರೀದಿಸಿದೆ. ಚಾಕೊಲೇಟ್ ಕಾರ್ಖಾನೆಯಲ್ಲಿ ಒಟ್ಟು 5,224.64 ಮೆ.ಟನ್ ಒಣ ಬೀಜ ಬಳಕೆಯಾಗಿದೆ.ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯು ಆರ್ಥಿಕ ವರ್ಷ ದಲ್ಲಿ 12,606.40 ಮೆ.ಟನ್ ಉತ್ಪಾದನೆ ಮಾಡಿದ್ದು, ಇದರಲ್ಲಿ ಕ್ಯಾಂಪ್ಕೊ ಸ್ವಂತ ಬ್ರಾಂಡ್ ಅಡಿಯಲ್ಲಿ 12,257.58 ಮೆ.ಟನ್ ಚಾಕೊಲೇಟ್ ಉತ್ಪನ್ನಗಳು, ಜಾಬ್-ವರ್ಕ್ ಅಡಿಯಲ್ಲಿ 258.40 ಮೆ.ಟನ್ ಹಾಗೂ 90.42 ಮೆ.ಟನ್ ತೆಂಗಿನ ಎಣ್ಣೆ ಸೇರಿವೆ ಎಂದರು.
88.65 ಕೋಟಿ ರೂ. ಮೌಲ್ಯದ ಕೊಕ್ಕೊ ಮತ್ತು ಚಾಕೊಲೇಟ್ ಉತ್ಪನ್ನಗಳು ಮಾರಾಟವಾಗಿದ್ದು, ಇದರಲ್ಲಿ ಸಿದ್ಧ/ಚಿಲ್ಲರೆ ಚಾಕೊಲೇಟ್ ವಿಭಾಗದಿಂದ 75.59 ಕೋಟಿ ರೂ., ಕೈಗಾರಿಕಾ ಚಾಕೊಲೇಟ್ ವಿಭಾಗದಿಂದ 384.91 ಕೋಟಿ ಮತ್ತು ರಫ್ತಿನಿಂದ 24.82 ಕೋಟಿ ಸೇರಿದೆ. ತೆಂಗಿನ ಎಣ್ಣೆ ಮಾರಾಟದಿಂದ 3.33 ಕೋಟಿ ಹಾಗೂ ಜಾಬ್-ವರ್ಕ್ ಸಂಸ್ಕರಣಾ ಶುಲ್ಕದಿಂದ 1.25 ಕೋಟಿ ಆದಾಯ ಬಂದಿದೆ ಎಂದು ತಿಳಿಸಿದರು.
ಕೊಕ್ಕೊ ಕೃಷಿಯನ್ನು ಬಲಪಡಿಸಿ ಗುಣಮಟ್ಟದ ಕೊಕ್ಕೊ ಗಿಡಗಳ ಪೂರೈಸುವ ಪ್ರಯತ್ನದ ಭಾಗವಾಗಿ, 2025-26ರಲ್ಲಿ ಕ್ಯಾಂಪ್ಕೊ 1,16,275 ಕೊಕ್ಕೊ ಸಸಿಗಳನ್ನು ಬೆಳೆಗಾರ-ಸದಸ್ಯರಿಗೆ ರಿಯಾಯಿತಿ ದರದಲ್ಲಿ ವಿತರಿಸಿದೆ. ಬೆಳೆಗಾರ-ಸದಸ್ಯರ ಕಲ್ಯಾಣಾಭಿವೃದ್ಧಿಯನ್ನು ಕ್ಯಾಂಪ್ಕೊ ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ.2025-26ರ ಅವಧಿಯಲ್ಲಿ ವಿವಿಧ ಸದಸ್ಯ ಸೌಲಭ್ಯ ಯೋಜನೆಗಳಡಿ ಒಟ್ಟು 120 ಫಲಾನುಭವಿಗಳಿಗೆ 6.42 ಲಕ್ಷ ಆರ್ಥಿಕ ನೆರವು ವಿತರಿಸಲಾಗಿದೆ ಎಂದರು.
ಡಿಜಿಟಲ್ ಪರಿವರ್ತನೆ ಕಾರ್ಯಕ್ರಮದ ಭಾಗವಾಗಿ, ಇಆರ್‌ಪಿ ವ್ಯವಸ್ಥೆಯೊಂದಿಗೆ ಸಂಯೋಜಿತವಾದ ಕ್ಯಾಂಪ್ಕೊ ಕಿಸಾನ್ ಮಿತ್ರ ಮೊಬೈಲ್ ಆ್ಯಪ್ ಅನ್ನು ಕ್ಯಾಂಪ್ಕೊ ಯಶಸ್ವಿಯಾಗಿ ಬಿಡುಗಡೆಗೊಳಿಸಿದೆ ಎಂದು ತಿಳಿಸಿದರು.
ಈ ಆ್ಯಪ್ ಮೂಲಕ ಸದಸ್ಯರು ತಮ್ಮ ಪ್ರೊಫೈಲ್, ಷೇರು ವಿವರ, ಡಿವಿಡೆಂಡ್, ಪ್ರೋತ್ಸಾಹಧನ, ಠೇವಣಿ, ಸಾಲ, ಮಾರುಕಟ್ಟೆ ದರ, ಶಾಖೆಗಳ ಮಾಹಿತಿ, ಅಧಿಸೂಚನೆಗಳು, ಕ್ಯಾಂಪ್ಕೊ ಪಡೆ ವಿವರ ಸೇರಿದಂತೆ ಹಲವು ಸೇವೆ ಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸುಲಭವಾಗಿ ಪಡೆಯಬಹುದು. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ. ಪಾರದರ್ಶಕ, ತಂತ್ರ ಜ್ಞಾನ ಆಧಾರಿತ ಮತ್ತು ಸದಸ್ಯ ಕೇಂದ್ರಿತ ಸೇವಾ ವಿತರಣೆಯತ್ತ ಇದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷ ಪ ದ್ಮರಾಜ ಪಟ್ಟಾಜೆ,ನಿರ್ದೇಶಕರಾದ ಎಂ. ಪುರುಷೋತ್ತಮ ಭಟ್,ಮಹಾಪ್ರಬಂಧ ಕರಾದ ರೇಶ್ಮಾ ಮಲ್ಯ,ಉಪ ಮಹಾ ಪ್ರಬಂಧ ಕ ಎಸ್ .ಗೋವಿಂದ ಭಟ್ ಮತ್ತಿತರರು ಉಪಸ್ಥಿತರಿದ್ದರು.









