ಮಂಗಳೂರು,ಸೆ.29 : ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಅವರ 110ನೇ ವರ್ಷದ ದಿನಾಚರಣೆಯ ಅಂಗವಾಗಿ ಮಣಿ ಕೃಷ್ಣ ಸ್ವಾಮಿ ಅಕಾಡೆಮಿ ಹಾಗೂ ರಾಮಕೃಷ್ಣ ಮಠದ ಸಹಯೋಗದಲ್ಲಿ ಅಕ್ಟೋಬರ್ 2ರಂದು ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಶ್ರೀ ವಿಭು ರಾವ್ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 2ರಂದು ಸಂಜೆ 5 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಭವನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ, ಎಂ.ಎಸ್. ಸುಬ್ಬಲಕ್ಷ್ಮಿ ಅವರ ಮೊಮ್ಮಗ ವಿ.ಶ್ರೀನಿವಾಸನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಮರಿಮೊಮ್ಮಕ್ಕಳಾದ ವಿದುಷಿ ಎಸ್. ಐಶ್ವರ್ಯ ಹಾಗೂ ವಿದುಷಿ ಎಸ್. ಸೌಂದರ್ಯ ಅವರಿಂದ ವಿಶೇಷ ಸಂಗೀತ ಕಚೇರಿ ನಡೆಯಲಿದೆ.ಸಂಗೀತ ಕಚೇರಿಗೆ ವಯಲಿನ್ನಲ್ಲಿ ವಿದುಷಿ ಅದಿತಿ ಕೃಷ್ಣಪ್ರಕಾಶ್, ಮೃದಂಗದಲ್ಲಿ ವಿದ್ವಾನ್ ಪುತ್ತೂರು ಟಿ. ನಿಕ್ಷಿತ್ ಹಾಗೂ ಕಂಜರದಲ್ಲಿ ವಿದ್ವಾನ್ ಆರ್.ಕಾರ್ತಿಕ್ ಸಹಕರಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿದುಷಿ ಗೀತಾ ಸರಳಾಯ, ಪಿ, ನಿತ್ಯಾನಂದ, ನಾಗೇಶ್, ಪ್ರೊ. ಕೃಷ್ಣಮೂರ್ತಿ ಹಾಗೂ ಚಂದ್ರಶೇಖರ್ ಕೆ. ಶೆಟ್ಟಿ ಉಪಸ್ಥಿತರಿದ್ದರು.











