ಬೆಂಗಳೂರು : ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ದಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೋವಿಡ್ ಪ್ರಕರಣಗಳು ಇದೀಗ ಮತ್ತೆ ಅಲ್ಪ ಜೀವ ಪಡೆದುಕೊಂಡಿದೆ. ಕೊರೊನಾ ವೈರಸ್ ಇಳಿಕೆಯಾಗಿದ್ದ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮಗಳು ಕೂಡ ಸಡಿಲಗೊಂಡಿತ್ತು. ಆದರೆ ಇದೀಗ ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ . ಅದ್ದರಿಂದ ಇದೀಗ ಮತ್ತೆ ಕೆಲವು ನಿರ್ಬಂಧಗಳತ್ತ ಸರಕಾರ ಮುಖಮಾಡಿದೆ.
ಹರಿಯಾಣ , ದೆಹಲಿ, ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರತಿದಿನ ಕೋವಿಡ್ ಪ್ರಕರಣಗಳು ಸ್ವಲ್ಪ ಹೆಚ್ಚಳವಾಗುತ್ತಿವೆ. ಅಲ್ಲದೆ ಇದೀಗ ಕರ್ನಾಟಕ ರಾಜ್ಯದಲ್ಲಿಯೂ ಕೊರೊನಾ ವೈರಸ್ ಪ್ರಕರಣಗಳು ಏರಿಕೆಯಾಗುತ್ತಿವೆ. ಅದ್ದರಿಂದ ಈ ರಾಜ್ಯಗಳಲ್ಲಿ ಮಾಸ್ಕ್ ಧರಿಸಲು ಮತ್ತೆ ಸೂಚಿಸಲಾಗಿದೆ. ಇದರ ಅನುಸರಣೆ ಮಾಡದಿದ್ದರೆ ದಂಡ ಪ್ರಯೋಗಕ್ಕೆ ಆದೇಶಿಸಿದೆ.
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಉಲ್ಬಣವನ್ನು ಕಡಿಮೆ ಮಾಡಲು, ಪೂರ್ವಭಾವಿ ಹೆಜ್ಜೆಯಾಗಿ, ರಾಜ್ಯ ಕೋವಿಡ್- 19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಮಾರ್ಗಸೂಚಿ ಆದೇಶವನ್ನು ಹೊರಡಿಸಲಾಗಿದೆ.
ಮಾರ್ಗಸೂಚಿಯ ಪ್ರಕಾರ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಪ್ರಯಾಣ ಸಮಯದಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಎರಡು ಅಡಿ ಅಂತರ ಕಾಯ್ದುಕೊಳ್ಳುವಂತೆ ಆದೇಶ ಮಾಡಲಾಗಿದೆ.