ಮಂಗಳೂರು, ಜ. 20 : ವಿಶ್ವ ಹಿಂದು ಪರಿಷತ್-ಬಜರಂಗದಳದಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬುದಾಗಿ ಅಳವಡಿಸಲಾಗಿದ್ದ ಬ್ಯಾನರನ್ನು ಪೊಲೀಸರು ಜ. 19 ಗುರುವಾರ ತೆರವುಗೊಳಿಸಿದ್ದಾರೆ.
ಜನವರಿ 15ರಿಂದ 21ರವರೆಗೆ ಕದ್ರಿ ದೇವಸ್ಥಾನದಲ್ಲಿ ಜಾತ್ರೆ ನಡೆಯಲಿದೆ. ಆದರೆ ಜಾತ್ರೆಯಲ್ಲಿ ಸನಾತನ ಧರ್ಮದ ಹಾಗೂ ಆಚರಣೆಯಲ್ಲಿ ನಂಬಿಕೆ ಹಾಗೂ ವಿಶ್ವಾಸ ಉಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶವಿದೆ ಎಂದು ಗುರುವಾರ ಕ್ಷೇತ್ರದ ಬಳಿ ಬ್ಯಾನರ್ ಹಾಕಲಾಗಿದೆ.
ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಮೊದಲು ಗುರಿ ಮಾಡಿದ್ದೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನವನ್ನು, ಅದ್ದರಿಂದ ಅಂತಹ ಮನಸ್ಥಿತಿ ಇರುವವರಿಗೆ ಹಾಗೂ ವಿಗ್ರಹಾರಾಧನೆಯನ್ನು ಹರಾಮ್ ಎಂದು ನಂಬಿರುವವರಿಗೆ ಈ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದೂ ಬ್ಯಾನರಲ್ಲಿ ಬರೆಯಲಾಗಿತ್ತು.
ಕದ್ರಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವುದರಿಂದ ಬ್ಯಾನರ್ ಅಳವಡಿಕೆಗೆ ಆಡಳಿತ ಮಂಡಳಿಯ ಅನುಮತಿ ಇರಲಿಲ್ಲ. ಹೀಗಾಗಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬ್ಯಾನರನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.











