ಚಿತ್ರದುರ್ಗ, ಫೆ 07 : ಬಿಜೆಪಿಯವರು ಜಾತಿ, ಧರ್ಮದ ಹೆಸರಲ್ಲಿ ಮತ ಕೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಮೂರುವರೆ ವರ್ಷದಿಂದ ಆಪರೇಷನ್ ಲೋಟಸ್ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಆಪರೇಷನ್ ಲೋಟಸ್ ಮೂಲಕ ಬಿಜೆಪಿ ಸರಕಾರ ರಚನೆ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವ ಹೊಂದಿರುವ ಪಕ್ಷವಾಗಿದ್ದು, ಕಾಂಗ್ರೆಸ್ ಈ ದೇಶದ ಶಕ್ತಿ ಹಾಗೂ ದೇಶದ ಇತಿಹಾಸವಾಗಿದೆ. ನಮ್ಮ ಪಕ್ಷ ಎಲ್ಲಾ ಸಮುದಾಯದವರು ಒಂದು ಎನ್ನುತ್ತದೆ. ಆದರೆ ಬಿಜೆಪಿ ಹಿಂದೂ ಧರ್ಮದ ಮೇಲೆ ಮತಗಳನ್ನು ಕೇಳುತ್ತಿದೆ ಎಂದು ಹೇಳಿದರು.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲಾಗುತ್ತದೆ ಎಂದು ಈ ಡಬಲ್ ಇಂಜಿನ್ ಸರಕಾರ ಹೇಳಿಕೊಂಡು ಬಂದಿದೆ. ಆದರೆ ನಮ್ಮ ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದಲ್ಲಿ ಒಪ್ಪಿಗೆ ಸಿಕ್ಕಿಲ್ಲ. ಮಾನ, ಮರ್ಯಾದೆ ಇದ್ದರೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮತ ಕೇಳಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ .