ಢಾಕಾ, ಆ.06 : ಬಾಂಗ್ಲಾದೇಶದಲ್ಲಿ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವ ಬೆನ್ನಲ್ಲೇ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಶೇಖ್ ಹಸೀನಾ ಅವರ ರಾಜೀನಾಮೆ ಬೆನ್ನಲ್ಲೇ ಮಿಲಿಟರಿ ಆಡಳಿತ ಪ್ರಾರಂಭವಾಗಿದೆ.
ಪ್ರöತಿಭಟನಾಕಾರರು ಶೇಖ್ ಹಸೀನಾ ಅವರ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಕಾರರು ಮನೆಗೆ ನುಗ್ಗಿ ಪ್ರತಿಭಟನೆ ಮಾಡುವ ಮುನ್ನವೇ ಶೇಖ್ ಹಸೀನಾ ರಾಜೀನಾಮೆ ನೀಡಿ ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೆಲ ಮಾಧ್ಯಮಗಳ ಪ್ರಕಾರ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.
ಬಾಂಗ್ಲಾದೇಶದ ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್ನ ಬೆಂಬಲಿಗರ ನಡುವೆ ಈ ಘರ್ಷಣೆ ನಡೆದಿದೆ.
ಬಾಂಗ್ಲಾದೇಶದ ಢಾಕಾದಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ಹಿಂಸಾಚಾರದಲ್ಲಿ 14 ಪೊಲೀಸರು ಸೇರಿದಂತೆ ಸುಮಾರು 100 ಮಂದಿ ಸಾವನ್ನಪ್ಪಿರುತ್ತಾರೆ ಎಂದು ಹೇಳಲಾಗಿದೆ.