ವಿಟ್ಲ,ನ.12: ಬೈಕಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ-ಕಬಕ ರಸ್ತೆಯ ಕಂಬಳಬೆಟ್ಟು ಎಂಬಲ್ಲಿ ಇಂದು ಮಂಗಳವಾರ ನಡೆದಿದೆ.
ಅಪಘಾತದಲ್ಲಿ ಬೈಕ್ ಸವಾರ ಅರ್ಕೆಜಾಲು ನಿವಾಸಿ ಯತೀಶ್ ಎಂಬವರು ಗಾಯಗೊಂಡಿದ್ದಾರೆ. ಕಾರು ಚಾಲಕ ಬೊಳಂತಿಮೊಗರು ನಿವಾಸಿ ಸನನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸನನ್ ಕಾರಿನಲ್ಲಿ ವಿಟ್ಲ-ಕಬಕ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಕಂಬಳಬೆಟ್ಟುವಿನ ಅರ್ಕೆಜಾಲು ಎಂಬಲ್ಲಿನ ಒಳ ರಸ್ತೆಯಿಂದ ಯತೀಶ್ ಚಲಾಯಿಸುತ್ತಿದ್ದ ಬೈಕ್ ಏಕಾಏಕಿ ಮುಖ್ಯರಸ್ತೆಗೆ ನುಗ್ಗಿದ್ದು ಈ ವೇಳೆ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಬೈಕಿಗೆ ಡಿಕ್ಕಿಯಾಗಿದೆ. ನಂತರ ಬೈಕ್ ರಸ್ತೆ ಪಕ್ಕದ ಚರಂಡಿಗೆ ಬಿದ್ದಿದ್ದು, ಮುಂದುವರಿದ ಕಾರು ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ನಿಲ್ಲಿಸಿದ್ದ ಬೈಕಿಗೂ ಡಿಕ್ಕಿ ಹೊಡೆದಿದೆ. ಬಳಿಕ ಕಾರು ರಸ್ತೆ ಬದಿಯ ಮಣ್ಣಿನ ದಿಬ್ಬದ ಮೇಲೆ ಉರುಳಿ ಬಿದ್ದಿದೆ ಎಂದು ವರದಿಯಾಗಿದೆ.