ಬೈಕಂಪಾಡಿ, ಸೆ. 11: ಮೊಗವೀರ ಮಹಾಸಭಾ ಬೈಕಂಪಾಡಿ ಇದರ ಆಡಳಿತಕ್ಕೆ ಒಳಪಟ್ಟ ಬೈಕಂಪಾಡಿ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ (ಮೀನುಗಾರಿಕ)ಯ ಹೊಸ ಕಟ್ಟಡದ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ ಮಂಗಳವಾರ ಇಂದಿರಾ ಮಾಧವ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು , ಮೊಗವೀರ ಮಹಾಸಭಾವು ಸಮುದಾಯದವರಿಗಾಗಿ ಕನ್ನಡ ಶಾಲೆ ಕಟ್ಟಿ ಕಾಲಾನಂತರ ಸರಕಾರದ ನೆರವಿನೊಂದಿಗೆ ಶಾಲೆಯನ್ನು ನಡೆಸುತ್ತಾ ಬಂದಿದೆ. ಆರ್ಥಿಕ ಸಂಕಷ್ಟವಿರುವ ಸಮಯದಲ್ಲಿ ದಾನಿಗಳಿಂದ ನೆರವು ಪಡೆದು ಮಕ್ಕಳ ಭವಿಷ್ಯ ಉಜ್ವಲವಾಗಲು ಶ್ರಮ ಪಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಮನವಿ ಪತ್ರ ಬಿಡುಗಡೆ ಮಾಡಿ ನಂತರ ಮಾತನಾಡಿದ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು, ಬೈಕಂಪಾಡಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಲು ಮನವಿಯನ್ನು ಈಗಾಗಲೇ ನೀಡಲಾಗಿದೆ. ಶಿಕ್ಷಣ ಸಚಿವರಲ್ಲಿ ಮಾತುಕತೆ ನಡೆಸಿ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಆಂಗ್ಲ ಮಾಧ್ಯಮವನ್ನು ಕೂಡ ಆರಂಭಿಸುವ ಸಲುವಾಗಿ ಬೇಕಾದ ಅನುಮತಿಯನ್ನು ಪಡೆಯಲಾಗುವುದು ಎಂದರು.
ಶಿಕ್ಷಣ ತಜ್ಞ ವಿದ್ಯಾಗಮ ಟ್ರಸ್ಟ್ನ ವಾಸುದೇವ ಐತಾಳ ಪಣಂಬೂರು ಶಿಲಾನ್ಯಾಸ ನೆರವೇರಿಸಿ, ಸರಕಾರದ ಕರ್ತವ್ಯದ ಜತೆಗೆ ಸಮಾಜವೂ ಕೈ ಜೋಡಿಸಿ ಇಲ್ಲಿನ ಶಾಲೆ ಕಟ್ಟಡ ಪೂರ್ಣಗೊಳಿಸಲು ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯ ಸುನೀತಾ, ಮನಪಾ ಸದಸ್ಯ ಸುಮಿತ್ರಾ ಕರಿಯಾ, ಉದ್ಯಮಿ ಶಿವಾನಂದ ಮೆಂಡನ್, ಉದ್ಯಮಿ ಸಾಹುಲ್ ಹಮೀದ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತಾಪುರ, ಜೆಡಿಎಸ್ ಯುವ ಘಟಕದ ಅಕ್ಷಿತ್ ಸುವರ್ಣ, ಜೆಎಸ್ ಡಬ್ಲ್ಯು ಅರವಿಂದ್ ಚತುರ್ವೇದಿ, ಪ್ರಕಾಶ್, ಬಿಎಎಸ್ ಎಫ್ನ ಸಂತೋಷ್ ಪೈ ಸಂತೋಷ್ ಗುರಿಕಾರ, ಓಂದಾಸ್ ಸಾಲ್ಯಾನ್, ಶಾಲಾ ಮುಖ್ಯ ಶಿಕ್ಷಕ ನಿರಂಜನ್, ಬೈಕಂಪಾಡಿ ಮೊಗವೀರ ಮಹಾಸಭಾದ ಅಂಗ ಸಂಸ್ಥೆಯ ಪ್ರತಿನಿಧಿಗಳು, ಮಹಿಳಾ ಸಮಾಜ ಪ್ರತಿನಿಧಿಗಳು ಉಪಸ್ಥಿತರಿದ್ದರು. ಬೈಕಂಪಾಡಿ ಮೊಗವೀರ ಮಹಾಸಭಾ ಅಧ್ಯಕ್ಷ ವಸಂತ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕುಮಾರ್ ಮೆಂಡನ್ ಸ್ವಾಗತಿಸಿದರು. ವಾಸುದೇವ ಸಾಲ್ಯಾನ್ ವಂದಿಸಿದರು.