ಮಂಗಳೂರು, ಸೆ.5 :ಸೆ. 6ರಿಂದ 8ರ ತನಕ ಸೆಲ್ಫ್ ಡಿಫೆನ್ಸ್ ‘ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೊಜೊ ಇದರ ಆಶ್ರಯದಲ್ಲಿ ‘ಶೌರ್ಯ ಅಂತರ್ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ -2024 ನಗರದ ಕುಲಶೇಖರದ ಕೋರ್ಡೆಲ್ ಚರ್ಚ್ ಮೈದಾನದಲ್ಲಿ ನಡೆಯಲಿದೆ ಎಂದು ಕುಲಶೇಖರ ಚರ್ಚ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷ ಹಾಗೂ ಅಂತರ್ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್-2024ರ ಚೀಫ್-ಡಿ- ಮಿಸನ್ ಯು.ಟಿ.ಖಾದರ್ ಹೇಳಿದರು.
ಅಂತರ್ ರಾಷ್ಟ್ರೀಯ ಕರಾಟೆ ತಂಡಗಳು ಹಾಗೂ ದೇಶದ ಪ್ರಮುಖ ಕರಾಟೆ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು 1,500 ಮಂದಿ ಕರಾಟೆ ಪಟುಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. 2,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಂಘಟನಾ ಸಮಿತಿಯ ಅಧ್ಯಕ್ಷ ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಮಂಗಳೂರು ವಂ.ಡಾ. ಪೀಟರ್ ಪಾಲ್ ಸಲ್ದಾನ ಆಶೀರ್ವನ ನೀಡಲಿರುವರು ಎಂದು ಅವರು ಹೇಳಿದರು.
ಕರಾಟೆ ಪಂದ್ಯಾವಳಿಯ ಆರಂಭಕ್ಕೂ ಮುನ್ನ ಕರಾವಳಿ ಕರ್ನಾಟಕದ ಬಗ್ಗೆ ವಿಶೇಷವಾಗಿ ಯಕ್ಷಗಾನ, ಜಾನಪದ ಗೀತೆ, ಪಿಳಿಕುಳ ನಿಸರ್ಗ ಧಾಮದ ವಿಶೇಷತೆ ಬಗ್ಗೆ 30 ನಿಮಿಷಗಳನ್ನು ದೃಶ್ಯ ಮಾಧ್ಯಮದ ಮೂಲಕ ಪ್ರದರ್ಶಿಸಲಾಗುವುದು. ಇದು ವಿದೇಶಿಯರಿಗೆ ಆಕರ್ಷಣೀಯವಾಗಲಿದೆ. ಅಲ್ಲದೆ ಸ್ಪರ್ಧೆಯ ಬಳಿಕ ಸಂಜೆ 6 ಗಂಟೆಗೆ ಸುಮಾರು 2 ಗಂಟೆಗಳ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮೂಡಬಿದಿರೆಯ ಆಳ್ವಾಸ್ನ ಸಾಂಸ್ಕೃತಿಕ ತಂಡಗಳು ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯವನ್ನು ನಡೆಸಿಕೊಡಲಿದೆ ಎಂದು ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರಾಟೆ ಚಾಂಪಿಯನ್ಶಿಪ್ ಸಂಘಟನಾ ಸಮಿತಿಯ ಅಧ್ಯಕ್ಷ ಕಿಯೋಸಿ ಸುರೇಂದ್ರ ಬಿ, ಉಪಾಧ್ಯಕ್ಷ ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಧಿಕಾರಿ ರಾಯ್ ಕ್ಯಾಸ್ಟಲಿನೊ, ಸಲಹೆಗಾರ ರಾಜಗೋಪಾಲ್ ರೈ, ಡಾ. ರಾಜುಲ್.ಟಿ.ಜಿ, ತಾಂತ್ರಿಕ ನಿರ್ದೆಶಕ ಕಿಯೋಸಿ ಸುರೇಶ್ ಕುಮಾರ್ ಶೆಟ್ಟಿ, ಕರಾಟೆ ಶಿಕ್ಷಕ ಜನಾರ್ದನ ನಾಯಕ್ ಉಪಸ್ಥಿತರಿದ್ದರು.