ಕೋಟ, ಆ.27: ಸಾಲಿಗ್ರಾಮ ಪಟ್ಟಣ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷರಾಗಿ ಮಾರಿಗುಡಿ ವಾರ್ಡ್ ಬಿಜೆಪಿಯ ಸದಸ್ಯೆ ಸುಕನ್ಯಾ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಕಡ ತೆಂಕುಹೋಳಿ ವಾರ್ಡ್ನ ಬಿಜೆಪಿಯ ಗಿರಿಜಾ ಪೂಜಾರಿ ಆಯ್ಕೆಯಾಗಿದ್ದಾರೆ.
ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ನ 10 ನೇ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ -ಅ (ಮಹಿಳೆ)ಗೆ ಮೀಸಲಿರಿಸಿ ಆಗಸ್ಟ್ 27ರಂದು ಚುನಾವಣೆ ನಿಗದಿಪಡಿಸಲಾಗಿತ್ತು.
ಅದರಂತೆ ಮಂಗಳವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಚುನಾವಣೆ ನಡೆಯಿತು. ಒಟ್ಟು ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ 16 ಸದಸ್ಯರಿದ್ದು, ಆ ಪೈಕಿ ಬಿಜೆಪಿ 10, ಕಾಂಗ್ರೆಸ್ 5 ಸದಸ್ಯರು ಮತ್ತು 1 ಪಕ್ಷೇತರ ಸದಸ್ಯರನ್ನು ಹೊಂದಿದೆ. ಚುನಾವಣೆಯಲ್ಲಿ ಶಾಸಕರಿಗೆ ಮತದಾನದ ಅವಕಾಶವಿರುವುದರಿಂದ ಇಂದು ನಡೆದ ಚುನಾವಣೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರೂ ಮತ ಚಲಾಯಿಸಿದರು. ಆದರೆ ಪಕ್ಷೇತರ ಸದಸ್ಯೆ ರತ್ನಾ ನಾಗರಾಜ್ ಗಾಣಿಗ ಮತದಾನ ನಿರಾಕರಿಸಿದರು. ಚುನಾವಣೆಯ ಬಳಿಕ ಸುಕನ್ಯಾ ಶೆಟ್ಟಿ ಹಾಗೂ ಗಿರಿಜಾ ಪೂಜಾರಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಡಳಿತದ ಗದ್ದುಗೆಯೇರಿದರು.