ಬೆಳ್ತಂಗಡಿ,ಆ.23 : ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಹಲವು ಶವಗಳನ್ನು ಹೂತಿದ್ದೇನೆ ಎನ್ನಲಾದ ಪ್ರಕರಣದ ದೂರುದಾರನನ್ನು ಎಸ್.ಐ.ಟಿ ಅಧಿಕಾರಿಗಳು ಬಂಧಿಸಿದ್ದು ಆತನನ್ನು ಆರೋಗ್ಯ ತಪಾಸಣೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಆ.22 ರಂದು ಮಂಗಳೂರು ಸಕ್ಷಮ ಪ್ರಾಧಿಕಾರದಿಂದ ಪ್ರೊಟೆಕ್ಷನ್ ಕಾಯ್ದೆಯನ್ನು ರದ್ದು ಮಾಡಿದ್ದು. ಆ.23 ರಂದು ಬೆಳಗ್ಗೆ ಬಂಧಿಸಿ 11 ಗಂಟೆಗೆ ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ ಎಂದು ಎಸ್.ಐ.ಟಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅನಾಮಿಕ ತೋರಿಸಿದ 17 ಪಾಯಿಂಟ್ಗಳಲ್ಲಿ ಎಸ್ಐಟಿ ತಂಡ ಸಮಾಧಿ ಶೋಧವನ್ನು ಶುರು ಮಾಡಿತ್ತು. ಆದರೆ ಏನೂ ಸಿಗದಿದ್ದ ಹಿನ್ನೆಲೆ ಎಸ್ಐಟಿ ತಂಡ ಸಮಾಧಿ ಶೋಧವನ್ನು ಸ್ಥಗಿತಗೊಳಿಸಿ ಮುಸುಕುಧಾರಿ ವಿರುದ್ಧವೇ ತನಿಖೆ ಶುರು ಮಾಡಿತ್ತು.
ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್ಐಟಿ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ್ದರು. ವಿವಿಧ ಆಯಾಮಗಳಲ್ಲಿ ಅನಾಮಿಕನ ಮುಂದೆ ಪ್ರಶ್ನೆಗಳನ್ನ ಇಟ್ಟಿದ್ದರು. ತನಿಖೆ ಬಳಿಕ ಅನಾಮಿಕನನ್ನು ಬಂಧಿಸಿದ್ದಾರೆ.
ಪೊಲೀಸರ ಮುಂದೆ ಸಾಕ್ಷಿ ದೂರುದಾರ ಹಲವಾರು ವಿಚಾರಗಳನ್ನು ಬಾಯಿಬಿಟ್ಟಿದ್ದು, ಈ ಬಗ್ಗೆ ಎಸ್.ಐ.ಟಿ ತಂಡ ಮತ್ತೆ ಹೆಚ್ಚಿನ ವಿಚಾರಣೆ ನಡೆಸುವ ಸಾದ್ಯತೆಯಿದೆ.