ಕಠ್ಮಂಡು, ಫೆ. 23 : ಪ್ರಯಾಣಿಕರಿದ್ದ ಬಸ್ಸೊಂದು ನದಿಗೆ ಉರುಳಿ ಬಿದ್ದಿರುವುದರಿಂದ 18 ಜನ ಸಾವನ್ನಪ್ಪಿರುವ ಘಟನೆ ನೇಪಾಳದ ಧಾಡಿಂಗ್ ಜಿಲ್ಲೆಯ ಗಜುರಿ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ. ಈ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು, 26 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಧಾಡಿಂಗ್ ಜಿಲ್ಲೆಯ ಗಜುರಿ ಸಮೀಪ ತ್ರಿಶೂಲಿ ನದಿಗೆ ಪ್ರಯಾಣಿಕರ ಬಸ್ ಉರುಳಿದೆ. ಪೋಖರಾದಿಂದ ಕಠ್ಮಂಡುವಿಗೆ ಬರುತ್ತಿದ್ದ ಬಸ್ ಬೆಳಗಿನ ಜಾವ ಸುಮಾರು 1.30ರ ವೇಳೆಗೆ ಪೃಥ್ವಿ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಸುಮಾರು 300 ಮೀಟರ್ ಇಳಿಜಾರಿನಲ್ಲಿ ಉರುಳಿ ನದಿಯ ದಡದಲ್ಲಿ ಬಿದ್ದಿದೆ. ಬಸ್‌ನಲ್ಲಿ ಒಟ್ಟು 40 ರಿಂದ 45 ಪ್ರಯಾಣಿಕರು ಇದ್ದರು.ಅಪಘಾತ ಸ್ಥಳದಿಂದ 18 ಮೃತದೇಹಗಳನ್ನು ಹೊರತೆಗೆದಿರುವುದಾಗಿ ನೇಪಾಳ ಸಶಸ್ತ್ರ ಪೊಲೀಸ್ ಪಡೆ ವಕ್ತಾರ ಬಿಷ್ಣು ಪ್ರಸಾದ್ ಭಟ್ಟ ಮಾಹಿತಿ ನೀಡಿದ್ದಾರೆ.
ಬಸ್ಸಿನಿಂದ 28 ಗಾಯಾಳುಗಳನ್ನು ರಕ್ಷಿಸಲಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನೇಪಾಳ ಸೇನೆ, ನೇಪಾಳ ಸಶಸ್ತ್ರ ಪೊಲೀಸ್ ಪಡೆ ಹಾಗೂ ನೇಪಾಳ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.











