ನವದೆಹಲಿ, ಜು.01: ಭಾರತೀಯ ಭೂಸೇನೆಯ 31ನೇ ಭೂಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಮಂಗಳಾವಾರ ಅಧಿಕಾರ ಸ್ವೀಕರಿಸಿದ್ದಾರೆ.
ಭಾರತೀಯ ಭೂಸೇನೆಯಲ್ಲಿ 4 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಜನರಲ್ ಉಪೇಂದ್ರ ದ್ವಿವೇದಿ ಅವರ ಉತ್ತರಾಧಿಕಾರಿಯಾಗಿ ಜನರಲ್ ಧೀರಜ್ ಸೇಠ್ ಅವರು ಭಾರತದ 31ನೇ ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು.
ಭಾರತೀಯ ಸೇನೆಯನ್ನು ತಂತ್ರಜ್ಞಾನ ಆಧಾರಿತ ಹಾಗೂ ಭವಿಷ್ಯದ ಸವಾಲುಗಳಿಗೆ ಸಜ್ಜಾದ ಪಡೆಯನ್ನಾಗಿ ಆಧುನೀಕರಿಸಲಾಗುವುದು ಎಂದು ಭರವಸೆ ನೀಡಿದ ಅವರು, ಜಾಗರೂಕತೆ, ನಾವೀನ್ಯತೆ, ಜಂಟಿ ಕಾರ್ಯಾಚರಣೆ, ಸ್ವಾವಲಂಬನೆ ಮತ್ತು ಸೈನಿಕರಿಗೆ ಆದ್ಯತೆ ನೀಡುವುದನ್ನು ಒಳಗೊಂಡ ತಮ್ಮ ಕಾರ್ಯತಂತ್ರದ ದೃಷ್ಟಿಕೋನವನ್ನು ವಿವರಿಸಿದ್ದಾರೆ.
ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಜನರಲ್ ಧೀರಜ್ ಸೇಠ್ ಭೂಸೇನೆಯ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಇಂದ ಪದವಿ ಪಡೆದು ಡಿಸೆಂಬರ್ 1986ರಲ್ಲಿ ಸೇನೆಗೆ ಸೇರಿದ್ದರು. ಜನರಲ್ ಧೀರಜ್ ಸೇಠ್ ಅವರು ಸುಮಾರು 40 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ.











