ಮಂಗಳೂರು,ಆ. 08 : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಇದರ ರಾಜ್ಯ ಸಮಿತಿಯ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ದಲಿತ ಹೋರಾಟಗಾರ ಎಂ. ದೇವದಾಸ್ ಅವರಿಗೆ ಗೌರವ ನುಡಿ ನಮನ ಕಾರ್ಯಕ್ರಮವನ್ನು ಆಗಸ್ಟ್ 10ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಉರ್ವಸ್ಟೋರ್ನ ದಕ್ಷಿಣ ಕನ್ನಡ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಅವರು ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ರಾಜ್ಯ ಸಂಚಾಲಕ ಎಂ. ಸೋಮಶೇಖರ್ (ಹಾಸನ) ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಮಾತನಾಡಿ, ಡಿಸಿ ಮನ್ನಾ ಭೂಮಿ ಹಂಚಿಕೆ ವಿಚಾರದಲ್ಲಿ ಎಂ. ದೇವದಾಸ್ ಅವರು ತೀವ್ರ ಹೋರಾಟ ನಡೆಸಿದ್ದು, ಅವರ ಹೋರಾಟವನ್ನು ಸಂಘಟನೆಯ ಮೂಲಕ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣಾನಂದ ಡಿ., ಸದಾಶಿವ ಪುಬಿದ್ರೆ, ರಾಜಯ್ಯ, ಬಾಬು ಕುಂದರ್, ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.











