ಮಂಗಳೂರು, ಸೆ. 02 : ಇಸ್ಕಾನ್ ಮಂಗಳೂರು ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ 2026 ಅನ್ನು ಸೆಪ್ಟೆಂಬರ್ 3 ಮತ್ತು 4ರಂದು ಪಿಲಿಕುಳದ ಸೌಟ್ಸ್ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಇಸ್ಕಾನ್ ಶ್ರೀಕೃಷ್ಣ ಬಲರಾಮ ಮಂದಿರದ ಅಧ್ಯಕ್ಷರಾದ ಗುಣಾಕರ ರಾಮದಾಸ ಅವರು ಮಂಗಳೂರಿನ ಇಸ್ಕಾನ್ ಪಿವಿಎಸ್ ಕಲಾಕುಂಜದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಕಾನ್ ಪಿವಿಎಸ್ ಕಲಾಕುಂಜ ವತಿಯಿಂದ ಆಯೋಜಿಸಲಾಗಿರುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಆಳ್ವಾಸ್ ವತಿಯಿಂದ ‘ಶ್ರೀಕೃಷ್ಣ ವೈಭವಂ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಭಾರತದ ಶ್ರೀಮಂತ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಲಾಗುವುದು. “ಅಂತರರಾಷ್ಟ್ರೀಯ ಭಜನ್ ಕ್ಲಬ್ಬಿಂಗ್” ಭಕ್ತಿಮಯ ಸಂಗೀತ, ಜಪ ಹಾಗೂ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮಂಗಳೂರಿನ 20ಕ್ಕೂ ಹೆಚ್ಚಿನ ಬ್ರಾಂಡ್ ಗಳ ಭಾಗವಹಿಸುವಿಕೆಯಲ್ಲಿ ‘ಕೃಷ್ಣ ರಸ ಬಜಾರ್’ ಆಹಾರೋತ್ಸವ ನಡೆಯಲಿದೆ. ಕೃಷ್ಣನಿಗಾಗಿ ಬ್ಲಾಗ್ ಕಾರ್ಯಕ್ರಮ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಸೆಪ್ಟೆಂಬರ್ 4ರಂದು ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಡೆಯುವ ಶ್ರೀಕೃಷ್ಣ ಬಲರಾಮ ಮಹಾಭಿಷೇಕದೊಂದಿಗೆ ಜನ್ಮಾಷ್ಟಮಿ ಆಚರಣೆಗೆ ತೆರೆ ಬೀಳಲಿದೆ. ಭಕ್ತರು ಹಾಗೂ ಸಾರ್ವಜನಿಕರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.ಭಕ್ತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇಸ್ಕಾನ್ ಪಿವಿಎಸ್ ಕಲಾಕುಂಜ್ನಿಂದ ಪಿಲಿಕುಳದ ಸೌಟ್ಸ್ ಭವನಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಸ್ಕಾನ್ ಮಂಗಳೂರು ಪ್ರಮುಖರಾದ ಸುಂದರ ಗೌರ ದಾಸ ಹಾಗೂ ನಂದನಾಚಾರ್ಯ ದಾಸ ಉಪಸ್ಥಿತರಿದ್ದರು.











