ಮಂಗಳೂರು, ಸೆ.22 : ರೈತ ಕುಡ್ಲ ಪ್ರತಿಷ್ಠಾನದ ನೇತೃತ್ವದಲ್ಲಿ ಹಾಗೂ ಸುರತ್ಕಲ್ ನ ಲಯನ್ಸ್ ಕ್ಲಬ್ ಮತ್ತು ಬಂಟರ ಸಂಘದ ಸಹಯೋಗದಲ್ಲಿ ಸುರತ್ಕಲ್ ನ ಬಂಟರ ಭವನದಲ್ಲಿ ಸೆ.25ರಿಂದ 27ರವರೆಗೆ ಸಸ್ಯೋತ್ಸವವನ್ನು ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಅವರು ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಸ್ಯೋತ್ಸವವು ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವಂತೆ ಕೃಷಿಕರಿಗೆ ಅಗತ್ಯವಾದ ಸಲಕರಣೆಗಳು, ತಂತ್ರಜ್ಞಾನ ಹಾಗೂ ಕೃಷಿ ಸಂಬಂಧಿತ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ಸಸ್ಯೋತ್ಸವವನ್ನು ಆಯೋಜಿಸಿದೆ. ಸಸ್ಯೋತ್ಸವವು ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ಮುಕ್ತ ವಾಗಿದೆ ಎಂದರು.
ಕೃಷಿ ಕ್ಷೇತ್ರದ ಆಧುನಿಕ ತಂತ್ರಜ್ಞಾನ, ನವೀನ ಉಪಕರಣಗಳು,ವಿವಿಧ ಸಲಕರಣೆಗಳ ಪರಿಚಯ, ಅವುಗಳ ಬಳಕೆ ಹಾಗೂ ಲಭ್ಯತೆ ಕುರಿತು ಕೃಷಿಕರಿಗೆ ಮಾಹಿತಿ ನೀಡುವುದು ಪ್ರಮುಖ ಉದ್ದೇಶವಾಗಿದೆ. ನರ್ಸರಿ ಸಂಸ್ಥೆಗಳು, ಕೈತೋಟ ಪ್ರಿಯರು, ಸಸ್ಯಶಾಸ್ತ್ರ ಪರಿಣಿತರು ವಿವಿಧ ಗಿಡಗಳ ಮಾರಾಟ ನಡೆಸುವರು, ವಿವಿಧ ಹಣ್ಣು, ಹೂವಿನ ಗಿಡಗಳ ಮಾರಾಟ, ಸಾವಯವ ಗೊಬ್ಬರ, ತರಕಾರಿ ಬೀಜಗಳ ಮಾರಾಟ ನಡೆಯಲಿದೆ. ಜತೆಗೆ ಗೃಹೋದ್ಯಮಿಗಳ ಮಳಿಗೆ, ಖಾದಿ ಉತ್ಪನ್ನಗಳು, ಮಣ್ಣಿನ ಮಡಕೆ, ಕರಕುಶಲ ಉತ್ಪನ್ನಗಳು ಮಾರಾಟಗೊಳ್ಳಲಿವೆ ಎಂದು ಹೇಳಿದರು.
ಸೆ. 25ರಂದು ಬೆಳಗ್ಗೆ 11 ಗಂಟೆಗೆ ಶಾಸಕ ಡಾ.ವೈ.ಭರತ್ ಶೆಟ್ಟಿ ಉದ್ಘಾಟನೆ ನೆರವೇರಿಸ ಲಿರುವರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭಾಗವಹಿಸಲಿರುವರು. ಎಂದರು.
ಕೃಷಿ ಮೇಳದ ಜತೆಗೆ ಆಹಾರ ಮೇಳವೂ ನಡೆಯಲಿದ್ದು, ವಿವಿಧ ಆಹಾರ ಉತ್ಪನ್ನಗಳ ಪರಿಚಯ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ರೈತಕುಡ್ಲ ಪ್ರತಿಷ್ಠಾನದ ಕಾರ್ಯದರ್ಶಿ ಲತೀಶ್ ಮಳಲಿ ಉಪಸ್ಥಿತರಿದ್ದರು.











