ಮಂಗಳೂರು, ಏ.28: ನಗರದ ಅಟಲ್ ಸೇವಾ ಕೇಂದ್ರದಲ್ಲಿ ಏ.24 ಸೋಮವಾರ ವೇದವ್ಯಾಸ ಕಾಮತ್ ಅವರು ತಮ್ಮ ಐದು ವರ್ಷಗಳ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿಯ ಕಾರ್ಯಗಳ “ಅಭಿವೃದ್ಧಿ ಪಥ” ಪುಸ್ತಕ ವನ್ನು ಬಿಡುಗಡೆಗೊಳಿಸಿ ನಂತರ ಮಾತನಾಡಿ, ಶಾಸಕನಾಗಿ ಕಳೆದ ಐದು ವರ್ಷಗಳ ಅವಧಿಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 4500 ಕೋಟಿ ರೂ.ಗಳಿಗೂ ಅಧಿಕ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇನೆ. 2000 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣಗೊಂಡಿದೆ ಎಂದರು.
ಮುಂದಿನ ಅವಧಿಯಲ್ಲಿ ಈಗ ಪ್ರಗತಿಯಲ್ಲಿರುವ ಕಾಮಗಾರಿಗಳು ಸಂಪೂರ್ಣಗೊಳ್ಳಲಿದೆ. ಇನ್ನಷ್ಟು ಅಭಿವೃದ್ಧಿ ಯೋಜನೆಗಳು ಕಾರ್ಯಯೋಜನೆಗೊಂಡು 2025ರ ವೇಳೆಗೆ ಮಂಗಳೂರು ನಗರದ ಚಿತ್ರಣವೇ ಬದಲಾಗಲಿದೆ ಎಂದು ಹಾಲಿ ಶಾಸಕ ಹಾಗೂ ದಕ್ಷಿಣ ವಿಧಾನಸಭಾ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಈ ಐದು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಜಲಸಿರಿ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, 792 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ನೀರಿನ ಪೈಪ್ ಗಳಲ್ಲಿ ಲೋಪ ಕಂಡು ಬಂದಲ್ಲಿ ಅದನ್ನು ತಕ್ಷಣ ಪರಿಹರಿಸಲು ಪಾಲಿಕೆಯಲ್ಲಿ ಕಂಪ್ಯೂಟರಿಕೃತ ವ್ಯವಸ್ಥೆಯ ಮೂಲಕ ಕ್ರಮ ಕೈಗೊಳ್ಳುವ ವಿಶೇಷ ವ್ಯವಸ್ಥೆ ಮಾಡಲಾಗುವುದು. 300 ಕೋಟಿ ಅನುದಾನದಲ್ಲಿ ಒಳಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
250 ಆಕ್ಸಿಜನ್ ಬೆಡ್, 50 ಕೋಟಿ ವೆಚ್ಚದಲ್ಲಿ ಸರ್ಜಿಕಲ್ ಬ್ಲಾಕ್, ಆಕ್ಸಿಜನ್ ಪ್ಲಾಂಟ್, 30 ಕೋಟಿ ರೂ ವೆಚ್ಚದಲ್ಲಿ ಲೇಡಿಗೋಶನ್ ಆಸ್ಪತ್ರೆ ನವೀಕರಣ,ತಾಯಿ-ಮಗು ವಿಶೇಷ ಚಿಕಿತ್ಸಾ ಕ್ರಮದ ಅಭಿವೃದ್ಧಿ, ನಾಲ್ಕು ನಮ್ಮ ಕ್ಲಿನಿಕ್ ಕೂಡ ವ್ಯವಸ್ಥೆಗೊಳಿಸಲಾಗಿದೆ.
ಕ್ರೀಡಾಳುಗಳಿಗೆ ಮಂಗಳಾ ಕ್ರೀಡಾಂಗಣದಲ್ಲಿ ಅತ್ಯುನ್ನತ ಮೂಲಭೂತ ಸೌಕರ್ಯ ಮತ್ತು ಉನ್ನತೀಕರಣ, ಬಂದರು ಮತ್ತು ಮೀನುಗಾರಿಕಾ ಅಭಿವೃದ್ಧಿಗಾಗಿ 65 ಕೋಟಿ ರೂ ವೆಚ್ಚದಲ್ಲಿ ಬೆಂಗ್ರೆಯಲ್ಲಿ ಜೆಟ್ಟಿ ನಿರ್ಮಾಣ ನಡೆಯಲಿದ್ದು, ಅನೇಕ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ಪ್ರವಾಸೋದ್ಯಮ ಬೆಳವಣಿಗಾಗಿ ನೇತ್ರಾವತಿ ನದಿ ತೀರದಿಂದ ಸುಲ್ತಾನ್ ಭತ್ತೇರಿ ತನಕ ರಿವರ್ ಫಂಟ್ ಯೋಜನೆ ಕೂಡ ಜಾರಿಗೆ ಬರಲಿದೆ.ತುಳುನಾಡಿನ ಸಂಸ್ಕೃತಿ, ಆಚಾರಗಳನ್ನು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಹುಲಿವೇಷದೊಂದಿಗೆ ಕುಣಿತ, ಪ್ರವಾಸೋದ್ಯಮ ಬೆಳವಣಿಗೆ ಬೀದಿಆಹಾರ ಉತ್ಸವ ಕೂಡ ಮಾಡಿದ್ದು ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಚುನಾವಣಾ ಉಸ್ತುವಾರಿ ಸುಪ್ರಸಾದ್ ಶೆಟ್ಟಿ, ಮಂಡಲ ಬಿಜೆಪಿ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ,ಪ್ರಮುಖರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಮೇಯರ್ ಗಳಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ರೂಪಾ ಡಿ ಬಂಗೇರ, ಸುರೇಂದ್ರ ಜೆ ಮೊದಲಾದವರು ಉಪಸ್ಥಿತರಿದ್ದರು.