ಮಂಗಳೂರು, ಫೆ. 06 : ಮಂಗಳೂರು ಧರ್ಮಕ್ಷೇತ್ರದಲ್ಲಿ ಸಂತ ವಿನ್ಸೆಂಟ್ ದಿ ಪೌಲ್ ಸೊಸೈಟಿಯ (SSVP) ಸ್ಥಾಪನಾ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮವು ನಗರದ ಫಾದರ್ ಮುಲ್ಲರ್ ಕನ್ನೆನನ್ ಸೆಂಟರ್‌ನಲ್ಲಿ ಜನವರಿ 25ರಂದು ಭಾನುವಾರ ಜರುಗಿತು.
ಸ್ಟೇಯ್‌ನಿಂದ ದೇಶದಿಂದ ಆಗಮಿಸಿದ ಸಂತ ವಿನ್ಸೆಂಟ್ ದಿ ಪೌಲ್ ಸೊಸೈಟಿಯ ಅಂತರಾಷ್ಟ್ರೀಯ ಅಧ್ಯಕ್ಷರಾದ ಜುವಾನ್ ಮ್ಯಾನುಯೆಲ್ ಬಿ. ಗೊಮೆಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,ನಮ್ಮ ಸ್ಥಾಪಕರಾದ ಫ್ರೆಡರಿಕ್ ಒಝನಾಮ್ ಅವರು ದಾನ ಧರ್ಮ ಮಾಡುವುದೆಂದರೆ ಸಂಕಷ್ಟದಲ್ಲಿರುವವರನ್ನು ನಮ್ಮ ಸಮಾನರಂತೆ ಕಾಣುವುದು, ಇದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ- ಎಂದು ಹೇಳಿದ್ದರು. ಅವರ ಆಶಯದಂತೆ ಕಳೆದ ಒಂದು ಶತಮಾನದಿಂದ ಮಂಗಳೂರು ಧರ್ಮಪ್ರಾಂತ್ಯದ ಎಸ್‌ಎಸ್‌ವಿಪಿ ಸದಸ್ಯರು ನಿಸ್ವಾರ್ಥತೆಯಿಂದ ಪರರ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅವರು ಮೂತ್ರಪಿಂಡ ಚಿಕಿತ್ಸೆ ಪಡೆಯುತ್ತಿರುವ ದಕ್ಷಿಣ ಕನ್ನಡದ ಅರ್ಹ ಬಡರೋಗಿಗಳ ಡಯಾಲಿಸಿಸ್ ಮತ್ತು ಇತರ ಚಿಕಿತ್ಸಾ ವೆಚ್ಚದ ಶೇ 50 ರಷ್ಟನ್ನು ಭರಿಸುವ ಜೋಸೆಫ್ ಎಲಿಯಾಸ್ ಮಿನೇಜಸ್ ಸಾಸ್ತಾನ ಇವರ ಟ್ರಿನಿಟಿ ಮೆಡಿಕೇರ್ ಟ್ರಸ್ಟ್ ಹಾಗೂ ಎಸ್‌ಎಸ್‌ವಿಪಿ ಕೇಂದ್ರಿಯ ಸಮಿತಿಯ ಜಂಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ ಪೀಟರ್ ಪಾವ್ಲ್ ಸಲ್ಡಾನ್ಹ ಅವರು ಮಾತಾಡಿ, ಬಡವರಿಗಾಗಿ ಮಾಡುವ ಸೇವೆಗೆ ದೇವರ ಆಶೀರ್ವಾದ ಯಾವಾಗಲೂ ಇರುತ್ತದೆ, ವಿನ್ಸೆಂಟ್ ಪೌಲ್ ಸೊಸಾಯ್ಟಿಯ ಸದಸ್ಯರ ಸೇವಾ ಕಾರ್ಯಕ್ರಮಗಳ ಬಗ್ಗೆ ಜನರಿಗೆ ವಿಶೇಷ ಗೌರವವಿದೆ ಎಂದು ಹೇಳಿದರು.
ಗೌರವ ಅತಿಥಿಗಳಾದ ಎಸ್‌ಎಸ್‌ವಿಪಿಯ ರಾಷ್ಟ್ರೀಯ ಅಧ್ಯಕ್ಷ ಜೂಡ್ ಮಂಗಳರಾಜ್ ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.











