ಉಡುಪಿ, ಜು. 09 : ರಸ್ತೆಯಲ್ಲಿ ಹರಿಯುತ್ತಿದ್ದ ನೆರೆ ನೀರಿನಿಂದ ಕಾರೊಂದು ಕೊಚ್ಚಿಕೊಂಡು ಹೋಗಿದ್ದು, ಕಾರೊಳಗೆ ಇದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜು. 08ರಂದು ಕನ್ನರ್ಪಾಡಿ-ಕಡೆಕಾರು ಎಂಬಲ್ಲಿ ನಡೆದಿದೆ.
ಕನ್ನರ್ಪಾಡಿ- ಕಡೆಕಾರು ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು, ಈ ರಸ್ತೆಯಲ್ಲಿಯೇ ಕಾರನ್ನು ಚಲಾಯಿಸಿದ ಪರಿಣಾಮ ನೀರಿನ ರಭಸಕ್ಕೆ ಕಾರು ನೆರೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ತಕ್ಷಣ ಅಪಾಯ ಅರಿತ ಕಾರಿನೊಳಗಿದ್ದ ನಾಲ್ವರು ಕಾರಿನ ಡೋರ್ ತೆರೆದು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಸ್ಥಳೀಯರೊಂದಿಗೆ ಸೇರಿ ನೆರೆಯಿಂದ ಕೊಚ್ಚಿ ಕಾರನ್ನು ಮೇಲಕ್ಕೇತ್ತಿದ್ದಾರೆ ಎಂದು ಹೇಳಲಾಗಿದೆ.