ಮಂಗಳೂರು, ಜು.19 : ಕೊಡಿಯಾಲಬೈಲಿನ ಭಗವತಿ ನಗರದ ಮಹಾಲಸಾ ದೃಶ್ಯಕಲಾ ಮಹಾ ಮಹಾವಿದ್ಯಾಲಯದ 2023-24ನೇ ಸಾಲಿನ ವಾರ್ಷಿಕ ಕಲಾಪ್ರದರ್ಶನ ಹಾಗೂ ವಾರ್ಷಿಕೋತ್ಸವ ‘ಪ್ರತಿಬಿಂಬಗಳು’ ಎಂಬ ಶೀರ್ಷಿಕೆಯಡಿ ಜು. 19ರಿಂದ ಜು. 03 ತನಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಕಾಲೇಜಿನ ಚಿತ್ರಕಲಾ ವಿಭಾಗ ಮುಖ್ಯಸ್ಥ ಎನ್.ಎಸ್. ಪತ್ತಾರ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎನ್.ಎಸ್. ಪತ್ತಾರ್ ಅವರು, ವಿದ್ಯಾರ್ಥಿಗಳು ರಚಿಸಿದ 400ಕ್ಕೂ ಹೆಚ್ಚು ವಿವಿಧ ಪ್ರಕಾರದ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ರೇಖಾಚಿತ್ರ, 2ಡಿ ವಿನ್ಯಾಸ, ಸ್ಥಿರಚಿತ್ರಣ, ಸೃಜನಶೀಲ ವರ್ಣಚಿತ್ರಗಳು, ನಿಸರ್ಗಚಿತ್ರ, ಮಂಡಲ ಚಿತ್ರಗಳು, ಜಾಹೀರಾತು ಕಲೆ, ಸಾಂದರ್ಭಿಕ ಚಿತ್ರಗಳು, ಡಿಜಿಟಲ್ ಕಲಾಕೃತಿಗಳು ಪ್ರದರ್ಶನದಲ್ಲಿ ಇರಲಿವೆ. ಜು. 19ರಿಂದ 21ರವರೆಗೆ ಕಲಾಪ್ರದರ್ಶನ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ ಎಂದು ಹೇಳಿದರು .
ಜು. 19ರಂದು ಬೆಳಗ್ಗೆ 10.30ಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಂಗಳೂರಿನ ಕಾರಂಜಿ ಇನ್ಫೋಟೆಕ್ ಪೈ.ಲಿ. ನಿರ್ದೇಶಕ ವಿಕ್ರಮ್ ಕೆಮ್ಮೆ, ಆರ್ಕಿಡ್ ಆರ್ಟ್ ಗ್ಯಾಲರಿ ನಿರ್ದೇಶಕ ವಿಲಿಯಂ ಪಾಯಸ್, ಶ್ರೀ ಮಹಾಲಸಾ ಶಿಕ್ಷಣ ಸಮಿತಿ ವ್ಯವಸ್ಥಾಪಕ ನಿರ್ದೇಶಕ ಬಾಬುರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗುವುದು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಎನ್.ಎಸ್. ಪತ್ತಾರ್ , ಪ್ರಾಚಾರ್ಯ ಮೋಹನ್ ಕುಮಾರ್ ಬಿ.ಪಿ., ಹಿರಿಯ ಉಪನ್ಯಾಸಕ ನಾಗರಾಜು ಉಪಸ್ಥಿತರಿದ್ದರು.