ಮಂಗಳೂರು, ಅ. 09 : ಶಕ್ತಿ ಶಿಕ್ಷಣ ಸಂಸ್ಥೆಯ ವತಿಯಿಂದ ನ. 16ರಂದು ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ 8ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ಕಲೆ, ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸುವ ‘ಶಕ್ತಿ ಫೆಸ್ಟ್ 2024’ ಆಯೋಜಿಸಲಾಗಿದೆ ಎಂದು ಮಂಗಳವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಶಕ್ತಿ ಎಜುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರ ರಮೇಶ್ ಕೆ. ಹೇಳಿದ್ದಾರೆ.
ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪಿಯುಸಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಟ್ಟು 14 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆ, ಉತ್ಪನ್ನ ಬಿಡುಗಡೆ (ಶಾರ್ಕ್ ಟ್ಯಾಂಕ್), ರಂಗೋಲಿ (ವಿಷಯ ನವರಾತ್ರಿ), ಮುಖವರ್ಣಿಕೆ ( ವಿಷಯ ಡ್ರಗ್ ಅಬ್ಯುಸ್) ಪುಷ್ಪಗುಚ್ಛ ತಯಾರಿ, ರೀಲ್ ಮೇಕಿಂಗ್, ಏಕ ವ್ಯಕ್ತಿ ಗಾಯನ – ಭಾವಗೀತೆ ಸ್ಪರ್ಧೆಗಳು ನಡೆಯಲಿದೆ ಎಂದು ಅವರು ಹೇಳಿದರು.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜನಪದ ಕುಣಿತ, ಸೈಬರ್ ಸೆಕ್ಯೂರಿಟಿ ವಿಷಯದಲ್ಲಿ ಪೋಸ್ಟರ್, ಮೇಕಿಂಗ್, ಪೆನ್ಸಿಲ್ ಸ್ಕೆಚ್, ಪರಿಸರ ಸ್ನೇಹಿ ನವ ಅವಿಷ್ಕಾರ ವಿಷಯದಲ್ಲಿ ವಿಜ್ಞಾನ ಮಾದರಿ, ಸಾಮಾಜಿಕ ಕಳಕಳಿಯ ಬೀದಿ ನಾಟಕ ಸ್ಪರ್ಧೆ, ನಿಧಿ ಬೇಟೆ, ಏಕ ವ್ಯಕ್ತಿ ಭಾವಗೀತೆ ಗಾಯನ ಸರ್ಧೆ ನಡೆಯಲಿದೆ ಎಂದರು.
ಕಾರ್ಯಕ್ರಮ ಸಂಯೋಜಕರಾದ ಸಬಿತ ಕಾಮತ್ ಮಾತನಾಡಿ, ಒಂದು ಶಾಲೆ ಅಥವಾ ಕಾಲೇಜಿನಿಂದ ಒಂದು ತಂಡಕ್ಕೆ ಅವಕಾಶವಿದ್ದು, ಒಬ್ಬ ವಿದ್ಯಾರ್ಥಿ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ತಂಡದ ಸದಸ್ಯರ ಗರಿಷ್ಠ ಮಿತಿ 25 ಆಗಿದ್ದು, ಭಾಗವಹಿಸುವ ತಂಡವು ಕಾಲೇಜಿನ ಅಥವಾ ಶಾಲೆಯಮುಖ್ಯೋಪಾಧ್ಯಾಯರ ಅನುಮತಿ ಪತ್ರದೊಂದಿಗೆ ಹಾಜರಿರಬೇಕು. ಭಾಗವಹಿಸುವ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಶಾಲಾ ಐಡಿ ಧರಿಸಿ ಬೆಳಗ್ಗೆ 8.30ಕ್ಕೆ ನೋಂದಣಿಗೆ ಹಾಜರಿರಬೇಕು. ಸ್ಪರ್ಧೆಗೆ ಹೆಸರು ನೋಂದಾಯಿಸಲು ನ. 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: Shakthi.edu. in ಇಮೇಲ್: fest@shakthi.edu. in ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿ ಯಲ್ಲಿ ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್., ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್, ಪ್ರಧಾನ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು.