ಮಂಗಳೂರು, ಡಿ. 11: ಸದ್ಗುರು ಮಾತಾ ಅಮೃತಾನಂದಮಯಿ ದೇವಿಯವರ ಹಿರಿಯ ಶಿಷ್ಯ ಹಾಗೂ ಮಠದ ಕಾರ್ಯದರ್ಶಿಯೂ ಆಗಿರುವ ಸ್ವಾಮಿ ಪೂರ್ಣಾಮೃತಾನಂದ ಪುರಿ ಅವರು ಡಿಸೆಂಬರ್ 14ರಂದು ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠಕ್ಕೆ ಆಗಮಿಸಲಿದ್ದಾರೆ. ಎಂದು ಬೋಳೂರು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್ ಅವರು ಮ೦ಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿ ಬೋಳೂರಿನಲ್ಲಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ನಡೆಯುವ ಸಾಮೂಹಿಕ ಶನಿ ದೋಷ ನಿವಾರಣೆ ಪೂಜೆಗೆ ಚಾಲನೆ ನೀಡಲಿದ್ದಾರೆ. ಅಮೃತ ವಿದ್ಯಾಲಯಂನಲ್ಲಿ ಅಂದು ಸಂಜೆ 5ರಿಂದ 8.30ರ ತನಕ ಜರಗುವ ಆಧ್ಯಾತ್ಮಿಕ ಕಾರ್ಯಕ್ರಮ ‘ಅಮೃತ ವೈಭವ’ದಲ್ಲಿ ಭಾಗವಹಿಸಲಿದ್ದಾರೆ. ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ, ದಕ್ಷಿಣ ಕನ್ನಡ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಎಸ್.ಎಲ್. ಶೇಟ್ ಜುವೆಲರ್ ಮತ್ತು ಡೈಮಂಡ್ ಹೌಸ್ ನ ಪಾಲುದಾರ ಪ್ರಶಾಂತ್ ಶೇಟ್ ಭಾಗವಹಿಸಲಿದ್ದಾರೆ. ಸ್ವಾಮೀಜಿಯವರ ಸಾರಥ್ಯದಲ್ಲಿ ಧ್ಯಾನ ಸತ್ಸಂಗ ಭಜನೆ, ಸ್ವಾರೋ ಪ್ರಸಾದ ವಿತರಣೆ ನಡೆಯಲಿದೆ ಎಂದರು.
ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಸಲಹೆಗಾರ ಡಾ| ವಸಂತ ಕುಮಾರ್ ಪೆರ್ಲ ಮಾತನಾಡಿ, ಬೋಳೂರಿನಲ್ಲಿರುವ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪ್ರತಿ ತಿಂಗಳ ಎರಡನೇ ಶನಿವಾರ ಜರಗಲಿರುವ ಶನಿದೋಷ ನಿವಾರಣೆ ಪೂಜೆಗೆ ಈ ವೇಳೆ ಚಾಲನೆ ಸಿಗಲಿ ದೆ ಎಂದರು.
ವೈದ್ಯಕೀಯ ಉಪಸಮಿತಿಯ ಸಂಚಾಲಕ ಡಾ| ದೇವಿಪ್ರಸಾದ್ ಎಸ್. ಹೆಜಮಾಡಿ ಮಾತನಾಡಿ, ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ತಮ್ಮ ಕೊಚ್ಚಿಯಲ್ಲಿರುವ ಅಮೃತಾ ಆಸ್ಪತ್ರೆಯ ವತಿಯಿಂದ ಹೃದಯ ಸಂಬಂಧಿತ ರೋಗಗಳಿಂದ ಸಂಕಷ್ಟ ಅನುಭವಿಸುತ್ತಿರುವ 18 ವರ್ಷಗಳ ಒಳಗಿನ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಸಹಿತ ಉಚಿತ ಸೇವೆ ಕಲ್ಪಿಸುವ ದೃಷ್ಟಿಯಿಂದ 2025ರ ಜ. 19ರಂದು ನಗರದ ಅಮೃತ ವಿದ್ಯಾಲಯಂನಲ್ಲಿ ನಡೆಯುವ ಉಚಿತ ಶಿಬಿರದ ಪ್ರಚಾರಕಾರ್ಯಕ್ಕೆ ಸ್ವಾಮೀಜಿಯವರು ಚಾಲನೆ ನೀಡಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಬೋಳೂರು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್, ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಸಲಹೆಗಾರ ಡಾ| ವಸಂತ ಕುಮಾರ್ ಪೆರ್ಲ, ಕಾರ್ಯದರ್ಶಿ ಡಾ| ದೇವದಾಸ ಪುತ್ರನ್ ಉಪಸ್ಥಿತರಿದ್ದರು.