ಬೆಂಗಳೂರು, ಜು. 16 : ನಗರದ ಹಲಸೂರು ಕೆರೆ ಬಳಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಎಂಬಾತನ ಹತ್ಯೆ ನಡೆದಿತ್ತು.ಈ ಕೊಲೆ ಸಂಬಂಧ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅಲ್ಲದೆ ಜಗದೀಶ್, ಕಿರಣ್, ವಿಮಲ್ ಮತ್ತು ಅನಿಲ್ ಎಂಬವವರ ಮೇಲೂ ಎಫ್ಐಆರ್ ದಾಖಲಾಗಿದೆ.
ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಅವರ ಮೇಲೆ ಹಲಸೂರು ಕೆರೆಯ ಬಳಿಯ ಅವರ ನಿವಾಸದ ಬಳಿ ಐದು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಹಲ್ಲೆಯ ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅವರ ತಾಯಿ ವಿಜಯಲಕ್ಷ್ಮಿ ಅವರು ಭಾರತಿನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಎಫ್ಐಆರ್ನಲ್ಲಿ ಭೈರತಿ ಬಸವರಾಜ್, ಅವರ ಸಹಾಯಕ ಜಗದೀಶ್ ಅಲಿಯಾಸ್ ಜಗ್ಗಾ ಮತ್ತು ಕಿರಣ್ ಎಂಬ ಸಂಬಂಧಿ ಸೇರಿದಂತೆ ಹಲವು ವ್ಯಕ್ತಿಗಳ ಹೆಸರುಗಳಿವೆ. ಶಾಸಕರು ಕೊಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಬೈರತಿ ಬಸವರಾಜ್ ಅವರು, ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಯಾರೇ ಸುಮ್ಮನೆ ದೂರು ನೀಡಿದರೂ ಎಫ್ಎಆರ್ ದಾಖಲಿಸಬಹುದೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಎಫ್ಐಆರ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.