ಮಂಗಳೂರು, ನ. 02 : ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು, ಶೈನ್ಎ ಫೌಂಡೇಶನ್ ಸಹಯೋಗದಲ್ಲಿ ನ.6 ರಿಂದ 8 ರವರೆಗೆ ‘ಸಿನರ್ಜಿಯಾ 2025’ ಎಂಬ ರಾಷ್ಟ್ರೀಯ ಸೃಜನಾತ್ಮಕ ನವೋದ್ಯಮ ಮೇಳವನ್ನು ಹಮ್ಮಿಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಸ್. ಇಂಜಗನೇರಿ ಅವರು ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ನ.6ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಡೆನ್ಮಾರ್ಕ್ನ ಇಜಿಡಿಕೆ ಸಂಸ್ಥೆಯ ಅಲನ್ ಬೆಕ್ ನೆರವೇರಿಸುವರು. ಎಚ್‌ಆರ್ ಮುಖ್ಯಸ್ಥೆ ಟಿನಾ ಬೊಡಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನ.8ರಂದು ಬೆಳಗ್ಗೆ 8 ಗಂಟೆಗೆ ಸಿನೆರ್ಜಿಯಾದ ಪ್ರಮುಖ ಕಾರ್ಯಕ್ರಮವಾದ ಏರ್‌ಶೋ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ವಿಜ್ಞಾನ ಮಾದರಿಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯ ನಡೆಯಲಿದೆ ಎಂದು ಅವರು ವಿವರಿಸಿದರು.
ಸಿನರ್ಜಿಯಾ 2025ರ ಕಾರ್ಯಕ್ರಮದಲ್ಲಿ 12ನೆ ವರ್ಷದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ ನಡಿ ಪ್ರೌಢಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ನವೀನ ಆಲೋಚನೆಗಳ ಮಾದರಿಗಳ ಪ್ರದರ್ಶನಕ್ಕೆ ಅವಕಾಶವಿದೆ. ಆಯ್ಕೆಯಾದ ತಂಡಗಳಿಗೆ 2 ಲಕ್ಷ ರೂ. ಮೊತ್ತದಲ್ಲಿ ಆ ಮಾದರಿಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹ ಧನವನ್ನು ಒದಗಿಸಲಾಗುತ್ತದೆ. ಉದ್ಯಮ ತಜ್ಞರಿಂದ ಚರ್ಚೆ ಸಂವಾದ, ಮಾಸ್ಟರ್ ಕ್ಲಾಸ್‌ಗಳು ಮತ್ತು ಕಾರ್ಯಾಗಾರಗಳು ನಡೆಯಲಿವೆ. 8ನೇ ವರ್ಷದ ಡೆವ್‌ಹೋಸ್ಟ್ ಕಾರ್ಯಕ್ರಮದಡಿ 36 ಗಂಟೆಗಳ ರಾಷ್ಟ್ರೀಯ ಹ್ಯಾಕಥಾನ್ ನಡೆಯಲಿದೆ. ದೇಶದ 425ಕ್ಕೂ ಅಧಿಕ ಶೈಕ್ಷಣಿಕ ಸಂಸ್ಥೆಗಳಿಂದ 10000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ . ಕಾರ್ಯಕ್ರಮವು ನವೋದ್ಯಮ, ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡೀನ್ ಡಾ.ಶಮಂತ್ ರೈ, ಡಾ. ಪ್ರಶಾಂತ್ ರಾವ್, ಕಾರ್ಯಕ್ರಮ ಸಂಯೋಜಕ ವಿದ್ಯಾರ್ಥಿಗಳಾದ ಜೀವಿತಾ ಜೆ.ಎಸ್., ವೈಭವ್ ಶೆಟ್ಟಿ, ಅನಿಕಾ ಪಿ.ಎಂ. ಉಪಸ್ಥಿತರಿದ್ದರು.











