ವಾಷಿಂಗ್ಟನ್, ಏ. 08 : ಮಧ್ಯಪ್ರಾಚ್ಯದಲ್ಲಿ ಕಳೆದ ಐದು ವಾರಗಳಿಂದ ಅಮೆರಿಕ ಹಾಗೂ ಇರಾನ್ ನಡುವಿನ ಕದನಕ್ಕೆ ಇದೀಗ ತಾತ್ಕಾಲಿಕ ವಿರಾಮ ಸಿಕ್ಕಿದೆ. ಇರಾನ್ ಮೇಲೆ ನಿರ್ಧರಿಸಲಾಗಿದ್ದ ಭಾರೀ ಸೈನಿಕ ದಾಳಿಯನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಎರಡು ವಾರಗಳ ಕದನ ವಿರಾಮ ಘೋಷಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಮನವಿಗೆ ಸ್ಪಂದಿಸಿದ ಟ್ರಂಪ್, ತುರ್ತು ರಾಜತಾಂತ್ರಿಕ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ದಾಳಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಬೆಳವಣಿಗೆ ಸಂಭವಿಸಿರುವುದು ಗಮನಾರ್ಹವಾಗಿದೆ.
ಕಳೆದ ಐದು ವಾರಗಳಿಂದ ನಡೆದಿದ್ದ ಯುದ್ಧದ ಪರಿಣಾಮವಾಗಿ ಜಗತ್ತಿನ ತೈಲ ಸರಬರಾಜಿನ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಬಂದ್ ಆಗಿತ್ತು. ಇದೀಗ, ಈ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಇರಾನ್ ಸಮ್ಮತಿಸಿದೆ. ಈ ನಿರ್ಧಾರವು ಜಾಗತಿಕ ತೈಲ ಮಾರುಕಟ್ಟೆ ಹಾಗೂ ವ್ಯಾಪಾರಕ್ಕೆ ದೊಡ್ಡ ಮಟ್ಟದ ಪರಿಹಾರ ಒದಗಿಸುವ ನಿರೀಕ್ಷೆಯಿದೆ.
ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಮತ್ತು ಯುದ್ಧದ ಕಾರಣದಿಂದ ಬಂದ್ ಆಗಿದ್ದ ‘ಹಾರ್ಮುಜ್ ಜಲಸಂಧಿ’ಯನ್ನುತಕ್ಷಣವೇ ಹಾಗೂ ಸುರಕ್ಷಿತವಾಗಿ ತೆರೆಯಲು ಇರಾನ್ ಒಪ್ಪಿಕೊಂಡಿದೆ.
ಇರಾನ್ ಅಮೆರಿಕ ಮುಂದಿಟ್ಟುಕೊಂಡಿರುವ ಶಾಂತಿ ಮಾತುಕತೆಗಾಗಿ 10 ಅಂಶಗಳ ಪ್ರಸ್ತಾವನೆಯನ್ನು ನೀಡಿದೆ. ಅದರ ಪ್ರಮುಖ ಅಂಶಗಳು ಇಂತಿವೆ:
* ಪರಸ್ಪರ ಆಕ್ರಮಣವಿಲ್ಲದಿರುವ ಬದ್ಧತೆ
* ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್ ನಿಯಂತ್ರಣ ಮುಂದುವರಿಕೆ
* ಯುರೇನಿಯಂ ಪುಷ್ಟೀಕರಣಕ್ಕೆ ಮಾನ್ಯತೆ
* ಎಲ್ಲಾ ಆರ್ಥಿಕ ನಿರ್ಬಂಧಗಳ ತೆರವು
* ಯುಎನ್ ಮತ್ತು ಐಎಇಎ ನಿರ್ಣಯಗಳ ಹಿಂಪಡೆತ
* ಜಲಸಂಧಿಯಿಂದ ಆದಾಯವನ್ನು ಪುನರ್ನಿರ್ಮಾಣಕ್ಕೆ ಬಳಕೆ
* ಇರಾನ್ಗೆ ಪರಿಹಾರ ಪಾವತಿ
* ಅಮೇರಿಕಾ ಸೈನ್ಯದ ಹಿಂತೆಗೆತ
* ಎಲ್ಲಾ ರಂಗಗಳಲ್ಲಿ ಯುದ್ಧ ನಿಲ್ಲಿಕೆ
* ಲೆಬನಾನ್ ಮೇಲೆ ಇಸ್ರೇಲ್ ದಾಳಿ ಸ್ಥಗಿತ











