ತಿರುವನಂತಪುರಂ, ಮೇ. 19: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಮೇ. 18, ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಅವರಿಗೆ ಹಾಗೂ 20 ಮಂದಿ ಸಚಿವರಿಗೆ ಪದ ಮತ್ತು ಗೌಪ್ಯತಾ ಪ್ರಮಾಣವಚನ ಬೋಧಿಸಿದರು.
ನೂತನ ಸಚಿವ ಸಂಪುಟದಲ್ಲಿ ಕಾಂಗ್ರೆಸ್ನ 11 ಮಂದಿಗೆ ಸ್ಥಾನ ದೊರೆತಿದ್ದು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಐವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಜೊತೆಗೆ ಕೇರಳ ಕಾಂಗ್ರೆಸ್-ಜೋಸೆಫ್ನ ಮಾನ್ಸ್ ಜೋಸೆಫ್, ಕೇರಳ ಕಾಂಗ್ರೆಸ್-ಜಾಕೋಬ್ನ ಅನೂಪ್ ಜಾಕೋಬ್, ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಶಿಬು ಬೇಬಿ ಜಾನ್, ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷದ ಸಿಪಿ ಜಾನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಕಾಂಗ್ರೆಸ್ನಿಂದ ರಮೇಶ್ ಚೆನ್ನಿತ್ತಲ್, ಕೆ. ಮುರಳೀಧರನ್, ಸನ್ನಿ ಜೋಸೆಫ್, ಎ.ಪಿ. ಅನಿಲ್ ಕುಮಾರ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಪಿ.ಸಿ. ವಿಷ್ಣುನಾಥ್, ಎಂ. ಲಿಜು, ಟಿ. ಸಿದ್ದಿಕ್, ಕೆ.ಎ. ತುಳಸಿ ಮತ್ತು ಒ.ಜೆ. ಜನೀಶ್ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕ ಗಾಂಧಿ, ಕೆ.ಸಿ ವೇಣು ಗೋಪಾಲ್, ಸಿಎಂ ಸಿದ್ದರಾಮಯ್ಯ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಮಾಜಿ ಸಿಎಂ ಪಿಣರಾಯ್ ವಿಜಯನ್,ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.











