ಮಂಗಳೂರು, ಆ.19 : ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ‘ಗುರುಚಿತ್ತಾರ-2026‘ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಆ.23ರಂದು ಬೆಳಗ್ಗೆ 9.30ಕ್ಕೆ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು , ಈ ಚಿತ್ರಕಲಾ ಸ್ಪರ್ಧೆಯಲ್ಲಿ 5ರಿಂದ 7ನೇ ತರಗತಿ, 8ರಿಂದ 10ನೇ ತರಗತಿ ಹಾಗೂ ಪಿಯುಸಿ-ಪದವಿ ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಿದ್ದು, ಎಲ್ಲ ಸಮಾಜದ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವಿದೆ. ಎರಡು ಗಂಟೆಗಳ ಕಾಲ ನಡೆಯುವ ಸ್ಪರ್ಧೆಗೆ ನೋಂದಣಿ ಸ್ಥಳದಲ್ಲೇ ಮಾಡಿಕೊಳ್ಳಬಹುದು ಎಂದು ಹೇಳಿದರು.
ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನಗಳಿಗೆ ಕ್ರಮವಾಗಿ ರೂ.5,000, ರೂ.3,000, ರೂ.2,000 ಹಾಗೂ ರೂ.1,000 ನಗದು ಬಹುಮಾನ, ಸ್ಮರಣಿಕೆ ನೀಡಲಾಗುವುದು. ಐದು ಸಮಾಧಾನಕರ ಬಹುಮಾನಗಳಿದ್ದು, ಎಲ್ಲ ಸ್ಪರ್ಧಾಳುಗಳಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಲೋಕನಾಥ ಅಮೀನ್, ಜೀವನ್ ಕುಮಾರ್ ತೊಕ್ಕೊಟ್ಟು, ಎ.ಜೆ. ಶೇಖರ್ ಹಾಗೂ ಸುಮಲತಾ ಉಪಸ್ಥಿತರಿದ್ದರು.











