ಮಂಗಳೂರು,ಸೆ.06 : ಕಲ್ಕೂರ ಪ್ರತಿಷ್ಠಾನ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದಲ್ಲಿ ಸೆ.4ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು.
ಅಂದು ಬೆಳಗ್ಗೆ ಶ್ರೀಕೃಷ್ಣ ವರ್ಣ ವೈಭವದೊಂದಿಗೆ ಕಾರ್ಯಕ್ರಮ ಆರಂಭಗೊಂಡು ಮಹಿಳೆಯರು ಸಾಂಪ್ರದಾಯಿಕವಾಗಿ ಹಾಡನ್ನು ಹಾಡುತ್ತಾ ಕಡಗೋಲಿನಿಂದ ಮೊಸರುಕಡೆದು ಬೆಣ್ಣೆ ತೆಗೆಯುವ ಮೂಲಕ ಈ ಬಾರಿ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಮೆರುಗು ನೀಡಿದರು.
ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಇತರ ಗಣ್ಯರೊಂದಿಹೆ ಸೇರಿ ದೀಪ ಬೆಳಗಿಸಿದರು. ಬಳಿಕ ಶುಭ ಹಾರೈಸಿದರು. 6 ತಿಂಗಳ ಕೆಳಗಿನ ಕಂದಮ್ಮಗಳನ್ನು ತೊಟ್ಟಿಲಿಗೆ ಹಾಕಿ ಜೋಗುಳ ಹಾಡುತ್ತಾ ಮಗುವನ್ನು ತೊಟ್ಟಿಲಲ್ಲಿ ತೂಗುವ ಕಾರ್ಯಕ್ರಮ ನಡೆಯಿತು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಕಳೆದ 44 ವರ್ಷಗಳಿಂದ ಕಲ್ಕೂರ ಪ್ರತಿಷ್ಠಾನ ವತಿಯಿಂದ ಕೃಷ್ಣ ವೇಷ ಸ್ಪರ್ಧೆ ನಡೆಸಲಾಗುತ್ತಿದೆ. 12 ವೇದಿಕೆಗಳಲ್ಲಿ ಏಕಕಾಲದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ..ಈ ಬಾರಿ ಕಡೆಗೋಲಿನಿಂದ ಮಜ್ಜಿಗೆ ಕಡೆಯುವ ಮೂಲಕ ಹೊಸದೊಂದು ವಿಭಾಗ ಸೃಷ್ಟಿಯಾಗಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಡಾ.ಎಂ.ಬಿ. ಪುರಾಣಿಕ್, ಡಾ. ಎಂ.ಪಿ. ಶ್ರೀನಾಥ್, ಹರಿಕೃಷ್ಣ ಪುನರೂರು, ಜಿ.ಕೆ ಭಟ್ ಸೇರಾಜೆ, ಲೀಲಾಕ್ಷ ಕರ್ಕೇರ, ಎಂ.ಶಶಿಧರ ಹೆಗ್ಡೆ, ಸಮೀರ್ ಪುರಾಣಿಕ್, ಚಂದ್ರಶೇಖರ ಶೆಟ್ಟಿ, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ, ವಿಜಯಲಕ್ಷ್ಮೀ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವೇಷಧಾರಿಗಳಿಗೆ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥ ದೇವರ ಭಾವಚಿತ್ರ, ಕೊಳಲು, ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್‌ಭಗವದ್ಗೀತೆಯ ಪ್ರತಿಯನ್ನು ಆಕರ್ಷಕ ಬಟ್ಟೆಚೀಲದೊಂದಿಗೆ ನೀಡಲಾಯಿತು.
ಬೆಳಗ್ಗೆ 9ರಿಂದ ರಾತ್ರಿ 12ರವರೆಗೆ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ವಿವಿಧ ಸ್ಪರ್ಧೆಗಳನ್ನು ಒಟ್ಟು 44 ವಿಭಾಗಗಳಲ್ಲಿ 12 ವೇದಿಕೆಗಳಲ್ಲಿ ಏಕ ಕಾಲದಲ್ಲಿ ಆಯೋಜಿಸಲಾಗಿತ್ತು.









