ಕಡಬ, ಫೆ. 20 : ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ನಡೆಸಿ ಯುವತಿ ಸೇರಿ ಇಬ್ಬರನ್ನು ಕೊಂದು ಹಾಕಿದೆ. ಮೃತರನ್ನು ರಂಜಿತಾ (21) ಹಾಗೂ ರಮೇಶ್ ರೈ ನೈಲ (55) ಎಂದು ಗುರುತಿಸಲಾಗಿದೆ .
ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ ಎಂಬವರು ಮನೆಯಿಂದ ಸೊಸೈಟಿ ಗೆ ಹೋಗುತ್ತಿದ್ದ ವೇಳೆ ಮೀನಾಡಿ ಎಂಬಲ್ಲಿ ಆನೆ ದಾಳಿ ನಡೆಸಿದೆ. ಆಕೆ ಬೊಬ್ಬೆ ಹೊಡೆದ ವೇಳೆ ಅಲ್ಲಿಗೆ ರಕ್ಷಿಸಲು ಬಂದ ರಮೇಶ್ ಎಂಬವರ ಮೇಲೂ ಆನೆ ದಾಳಿ ನಡೆಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ರಮೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಯುವತಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅರಣ್ಯ ಇಲಾಖೆಯ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಮಂಗಳೂರು ವಿಭಾಗದ ಡಿಎಫ್ಓ ದಿನೇಶ್ ಕುಮಾರ್ ಭೇಟಿ ನೀಡಿದ್ದು. ಸಂಜೆಯೊಳಗಡೆ ಆನೆಗಳನ್ನು ಹಿಡಿಯುವ ವ್ಯವಸ್ಥೆ ಮಾಡುತ್ತೇವೆ. ನಾಗರಹೊಳೆ, ದುಬಾರೆ ಆನೆ ಕ್ಯಾಂಪ್ ನಲ್ಲಿರುವ ಪಳಗಿದ ಆನೆಗಳನ್ನು ತಂದು ಕಾಡಾನೆ ಹಿಡಿಯುತ್ತೇವೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.