ಮಂಗಳೂರು, ಜೂ. 18 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಜೂನ್ 18 ಮಂಗಳವಾರದಂದು ಮ.ಮ.ಪಾ. ಕಟ್ಟಡದಲ್ಲಿರುವ ಕೊಂಕಣಿ ಸಾಹಿತ್ಯ ಅಕಾಡಮಿಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡು ಅವರು ಮಾತನಾಡಿದ ಅವರು ನಾನು ಕಳೆದ 35 ವರ್ಷಗಳಿಂದ ಮಂಡ್ ಸೊಭಾನ್ ಮೂಲಕ ಕೊಂಕಣಿ ಭಾಷೆಯ ಬೆಳವಣಿಗೆಗೆ ಶ್ರಮಿಸಿದ್ದೇನೆ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ, ಕೊಂಕಣಿ ಭಾಷೆಗೆ ಉತ್ತೇಜನ ನೀಡುವ ಹೆಚ್ಚಿನ ಜವಾಬ್ದಾರಿ ಈಗ ನನ್ನ ಮೇಲಿದೆ. ಕೊಂಕಣಿ ಭಾಷೆ, ಸಾಹಿತ್ಯ, ಸಂಶೋಧನೆಗೆ ಸಂಬಂಧಿಸಿದ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರೊಂದಿಗೆ, ಅಕಾಡೆಮಿ ಸದಸ್ಯರೊಂದಿಗೆ ಚರ್ಚಿಸಿ, ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಮಾತನಾಡಿ, ಕಳೆದ ೩೦ ವರ್ಷಗಳಿಂದ ಕೊಂಕಣಿ ಅಕಾಡೆಮಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದು, ಭಾಷೆಯ ಸೊಗಡನ್ನು ಇನ್ನಷ್ಟು ಎತ್ತರಕ್ಕೇರಿಸುವ ಜವಾಬ್ದಾರಿ ಅಧ್ಯಕ್ಷರ ಮೇಲಿದೆ. ಅಕಾಡೆಮಿಗೆ ಅನುದಾನಗಳು ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವ ಕೆಲಸ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಡಾ| ಪ್ರಶಾಂತ್ ಮಾಡ್ತಾ, ರೊನಾಲ್ಡ್ ಕ್ರಾಸ್ತಾ, ಸಮರ್ಥ ಭಟ್, ಸುನಿಲ್ ಸಿದ್ದಿ ಯಲ್ಲಾಪುರ, ದಯಾನಂದ ಮಡ್ಕೇಕರ್ ಕಾರ್ಕಳ, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್., ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ಚಂದ್ರ ಆಳ್ವ, ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.