ಮಂಗಳೂರು, ಜು.31: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸಹಯೋಗದೊಂದಿಗೆ ತುಳು ನಾಟಕ ಕಲಾವಿದರ ಒಕ್ಕೂಟದ 21ನೇ ವಾರ್ಷಿಕ ಸಂಭ್ರಮ ಆ. 2,ಮಂಗಳವಾರ ಸಂಜೆ 5.30ಕ್ಕೆ ನಗರದ ಕುದುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಹೇಳಿದರು.
ಪತ್ರಿಕಾಭವನ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ತೌಳವ ಪ್ರಶಸ್ತಿ ಪ್ರಧಾನ. ಹಿರಿಯ ಕಲಾವಿದರಿಗೆ ಸನ್ಮಾನ, ಕೀರ್ತಿಶೇಷ ಕಲಾವಿದರ ನೆಂಪು ಕಾರ್ಯಕ್ರಮ, ಅಶಕ್ತ ಕಲಾವಿದರಿಗೆ ಗೌರವಧನ ವಿತರಣೆ ನಡೆಯಲಿದೆ.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಅಧ್ಯಕ್ಷತೆ ವಹಿಸುವರು. ಮೇಯರ್ ಸುಧೀರ್ ಶೆಟ್ಟಿ ತೌಳವ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಹಿರಿಯನಾಟಕಕಾರ ಡಾ| ಸಂಜೀವ ದಂಡಕೇರಿ, ಉದ್ಯಮಿಗಳಾದ ಸಂತೋಷ್ ಪೂಂಜಾ, ರಾಜೇಶ್ ಶೆಟ್ಟಿ, ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್, ನೀರುಮಾರ್ಗ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸತೀಶ್ ಅಂಚನ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಉಪಾಧ್ಯಕ್ಷರಾದ ಗೋಕುಲ್ ಕದ್ರಿ, ತಾರಾನಾಥ ಶೆಟ್ಟಿ ಬೋಳಾರ್, ಕೋಶಾಧಿಕಾರಿ ಮೋಹನ ಕೊಪ್ಪಲ, ಕ್ಷೇಮನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ ಉಪಸ್ಥಿತರಿದ್ದರು.