ಮಂಗಳೂರು, ಅ.09 : ನಗರದ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳೂರು ತಾಲೂಕು ಬಿಲ್ಲವ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ದಸರಾ ಕ್ರೀಡಾಕೂಟ ಭಾನುವಾರ ನಡೆಯಿತು. ದಸರಾ ಕ್ರೀಡಾಕೂಟವನ್ನು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಬಿ. ಜನಾರ್ದನ ಪೂಜಾರಿಯವರು, ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಅಗತ್ಯ ಈ ನಿಟ್ಟಿನಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅವರು ಬಹಳಷ್ಟು ಆರೋಗ್ಯವಂತರಾಗಿ ಇರು ತ್ತಾರೆ. ಮಂಗಳೂರು ತಾಲೂಕು ಬಿಲ್ಲವ ಸಂಘದ ವತಿಯಿಂದ ನಡೆಯುವ ದಸರಾ ಕ್ರೀಡಾಕೂಟವು ಸಾಕಷ್ಟು ಹೊಸ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಕ್ರೀಡಾಕೂಟಗಳು ಹೆಚ್ಚಾಗಿ ನಡೆದರೆ ಕ್ರೀಡಾ ಪಟುಗಳಿಗೆ ಹೆಚ್ಚು ಅವಕಾಶ ದೊರೆಯುತ್ತದೆ. ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ, ಸರಕಾರ ಮಟ್ಟದಲ್ಲಿ ದಸರಾ ಕ್ರೀಡಾಕೂಟಗಳು ನಡೆಯುತ್ತಿದೆ. ಆದರೆ ಬಿಲ್ಲವ ಸಂಘಟನೆ ಕ್ರೀಡಾಪಟುಗಳನ್ನು ಬೆಳೆಸಲು ದಸರಾ ಕ್ರೀಡಾಕೂಟವನ್ನು ಜಿಲ್ಲಾ ಮಟ್ಟದಲ್ಲಿ ಮಾಡುವ ಜತೆಗೆ ಮುಕ್ತ ಅವಕಾಶವನ್ನು ನೀಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಚೀಪ್ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್, ಬಿಲ್ಲವ ಸಮಾಜದ ಮುಖಂಡ ಮಾಧವ ಸುವರ್ಣ, ಎಂಎಲ್‌ಸಿ ಐವನ್ ಡಿಸೋಜ, ಶಾಂತಲಾ ಗಟ್ಟಿ, ಮಂಗಳೂರು ತಾಲೂಕು ಬಿಲ್ಲವ ಸಂಘದ ಜಿತೇಂದ್ರ ಸುವರ್ಣ, ಯುವವಾಹಿನಿಯ ಹರೀಶ್, ಜಗನ್ನಾಥ್ ಬಂಗೇರಾ, ದಯಾ ನಂದ ಪೂಜಾರಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ದಸರಾ ಕ್ರೀಡೋತ್ಸವದ ಹೈಸ್ಕೂಲ್ ವಿಭಾಗ, ಸೀನಿಯರ್‌ವಿಭಾಗದಲ್ಲಿ ನಾನಾ ಅಥ್ಲೆಟಿಕ್ಸ್ ಜತೆಗೆ ಕಬಡ್ಡಿ, ಹಗ್ಗಜಗ್ಗಾಟ ನಡೆಯಿತು.