ಮಂಗಳೂರು, ಆ.15: ಉಳ್ಳಾಲ ನೂತನ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಆ.17ರಂದು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ., ಉಳ್ಳಾಲ ಖಾಝಿಯಾಗಿದ್ದ ಸೈಯದ್ ಫಝಲ್ ಕೋಯಮ್ಮ ತಂಙಳ್ ಅವರ ನಿಧನದಿಂದ ತೆರವಾಗಿರುವ ಖಾಝಿ ಸ್ಥಾನಕ್ಕೆ ಎ.ಪಿ. ಉಸ್ತಾದ್ ರನ್ನು ಖಾಝಿಯಾಗಿ ಜುಲೈ 20ರಂದು ನೇಮಕ ಮಾಡಲಾಗಿತ್ತು. ಅದರಂತೆ ಖಾಝಿ ಸ್ವೀಕಾರ ಕಾರ್ಯಕ್ರಮ ಆ.17ರಂದು ಬೆಳಗ್ಗೆ 9:30ಕ್ಕೆ ದರ್ಗಾ ವಠಾರದಲ್ಲಿರುವ ಮದನಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿ ಮತ್ತು ಸೈಯದ್ ಮದನಿ ಅರಬಿಕ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸೈಯದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳಿಗಾಗಿ ನೂತನ ಸುಸಜ್ಜಿತ ಹಾಸ್ಟೆಲ್ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮವೂ ಈ ಸಂದರ್ಭ ಜರುಗಲಿದೆ ಎಂದರು.
ಎ.ಪಿ. ಉಸ್ತಾದ್ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸೈಯದ್ ಕೆ.ಎಸ್.ಆಟಕ್ಕೋಯ ತಂಙಳ್ ಕಾರ್ಯಕ್ರಮ ಉದ್ಘಾಟಿಸುವರು. ಇ.ಸುಲೈಮಾನ್ ಉಸ್ತಾದ್, ಅಲಿ ಬಾಫಕಿ ತಂಙಳ್, ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಝಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಯೆನೆಪೊಯ ವಿವಿ ಕುಲಾಧಿಪತಿ ಡಾ.ವೈ,ಅಬ್ದುಲ್ಲ ಕುಂಞಿ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿ ದರು.