ಮಂಗಳೂರು, ಜು.3: ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜು. 7, ಸೋಮವಾರ ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಎಲ್ ಸಿಆರ್ ಐ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯ ಮೈಮ್ ರಾಮ್‌ದಾಸ್ ಅವರು ಗುರುವಾರ ಪತ್ರಿಕಾಭನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ ಹಿರಿಯ ನಟ ಲಕ್ಷ್ಮಣ ಕುಮಾರ್ ಮಲ್ಲೂರು ಅವರಿಗೆ ರಂಗ ಭಾಸ್ಕರ ಪ್ರಶಸ್ತಿ ಪ್ರದಾನ ನಡೆಯಲಿದೆ.2008ರಲ್ಲಿ ಪ್ರಾರಂಭವಾದ ರಂಗ ಸಂಗಾತಿ ಸಂಸ್ಥೆಯು ಬಹುಮುಖ ಪ್ರತಿಭೆ, ರಂಗಸಂಗಾತಿಯ ಸ್ಥಾಪಕ ಸದಸ್ಯ ದಿ. ಭಾಸ್ಕರ ನೆಲ್ಲಿತೀರ್ಥ ಅವರ ನೆನಪಿನಲ್ಲಿ ರಂಗ ಭಾಸ್ಕರ ಪ್ರಶಸ್ತಿಯನ್ನುನೀಡುತ್ತಿದೆ. ಈಗಾಗಲೇ 10 ಮಂದಿ ಸಾಧಕರಿಗೆ ರಂಗ ಭಾಸ್ಕರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿರುವ ಲಕ್ಷ್ಮಣ ಕುಮಾರ್ ಮಲ್ಲೂರು, ಬಾಲ ನಟನಾಗಿ ರಂಗ ಪ್ರವೇಶ ಮಾಡಿ 65 ವರ್ಷಗಳಿಂದ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 30ಕ್ಕೂ ಹೆಚ್ಚು ಕನ್ನಡ, ತುಳು ಸಿನೆಮಾಗಳಲ್ಲಿ ಅಭಿನಯದ ಜತೆಗೆ ಧಾರವಾಹಿ, ಕಿರುಚಿತ್ರ, ಜಾಹೀರಾತುಗಳಲ್ಲಿಯೂ ತಮ್ಮ ಅಭಿನಯಿಸಿದ್ದಾರೆ ಎಂದವರು ಹೇಳಿದರು.
ಕಾರ್ಯಕ್ರಮವನ್ನು ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದು, ಭಾಗವತ ಪಟ್ಲ ಸತೀಶ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಹೆಗ್ಗೋಡಿನ ಜನಮನದಾಟ ತಂಡದಿಂದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಮಾಯಾ ಮೃಗ ಹಾಗೂ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ರವವರ ಎದೆಯ ಹಣತೆ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಶಶಿರಾಜ್ ಕಾವೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರುಣಾಕರ ಶೆಟ್ಟಿ, ಪ್ರಸಾದ್ ಶೆಟ್ಟಿ, ನಾಗೇಶ್ ಶೆಟ್ಟಿ ಬಜಾಲ್, ರಂಜನ್ ಬೋಳೂರು ಮೊದಲಾದವರು ಉಪಸ್ಥಿತರಿದ್ದರು.