ಮಂಗಳೂರು , ಎ. 17 : ನಗರದ ಎಂ.ಸಿ.ಸಿ ಬ್ಯಾಂಕ್ ಲಿಮಿಟೆಡ್ 2025ರ ಮಾರ್ಚ್ 31ಕ್ಕೆ ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ 13 ಕೋಟಿ ರೂ. ವ್ಯಾವಹಾರಿಕ ಲಾಭ ಗಳಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷದಲ್ಲಿ ಶೇ.1.30 ಎನ್.ಪಿ.ಎ. ದಾಖಲಿಸಿದೆ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರು ಮಂಗಳವಾರ ಎಂ.ಸಿ.ಸಿ ಬ್ಯಾಂಕ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, 2024-25ನೇ ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ76 ಕೋಟಿ ರೂ.ನಿಂದ 86.68 ಕೋಟಿ ರೂ.ಗೆ ತಲುಪಿದೆ. ಬ್ಯಾಂಕಿನ ವ್ಯವಹಾರ 1240 ಕೋಟಿ ರೂ. ದಾಟಿದ್ದು, ಕಳೆದ ವರ್ಷಕ್ಕಿಂತ ಶೇ.15 ಏರಿಕೆಯಾಗಿದೆ. ಒಟ್ಟು ಠೇವಣಿಯಲ್ಲಿ ಶೇ.11 ಪ್ರಗತಿ ಸಾಧಿಸಿದ್ದು, 705.40 ಕೋಟಿ ರೂ. ಠೇವಣಿ, – ಒಟ್ಟು ಮುಂಗಡದಲ್ಲಿ ಶೇಕಡಾ 20.37 ಪ್ರಗತಿ ಸಾಧಿಸಿದ್ದು 535.49 ಕೋಟಿ ರೂ. ಮುಂಗಡಗಳು, ದುಡಿಯುವ ಬಂಡವಾಳ 836.73 ಕೋಟಿ ರೂ.(ಪ್ರಗತಿ ಶೇ.11.13) ಮತ್ತು ಶೇರು ಬಂಡವಾಳ 32.43 ಕೋಟಿ ರೂ.(ಪ್ರಗತಿ ಶೇ.3.91) ಆಗಿ ರುತ್ತದೆ ಎಂದರು.
2024-25ನೇ ವಿತ್ತೀಯ ವರ್ಷದಲ್ಲಿ ಬೆಳ್ತಂಗಡಿ ಮತ್ತು ಬೆಳ್ಳಣ್‌ನಲ್ಲಿ ಕ್ರಮವಾಗಿ 18ನೇ ಮತ್ತು 19ನೇ ಶಾಖೆಯನ್ನು ತೆರೆದಿದೆ.ಜುಲೈ ಅಂತ್ಯದೊಳಗೆ ಬೈಂದೂರಿನಲ್ಲಿ 20ನೇ ಶಾಖೆ ಕಾರ್ಯಾರಂಭಗೊಳ್ಳಲಿದೆ. ಮುಂದಿನ ಜೂನ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಕುಲಶೇಖರ ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಶಾಖೆಯ ಸ್ಥಳಾಂತರ, ಗ್ರಾಹಕರ ಸುಲಭ ವ್ಯವಹಾರಕ್ಕಾಗಿ ಎಂ.ಸಿ.ಸಿ. ಬ್ಯಾಂಕ್ ಗೂಗಲ್ ಪೇ, ಫೋನ್ ಪೇ, ಯುಪಿಎ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಬೈಂದೂರ್‌ನಲ್ಲಿ ಶೀಘ್ರದಲ್ಲೇ ಶಾಖೆಯನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ,ನಿರ್ದೇಶಕರಾದ ಅಂಡ್ರ್ಯೂ ಡಿಸೋಜ, ಡಾ.ಜೆರಾಲ್ಡ್ ಪಿಂಟೊ, ಜೆ.ಪಿ.ರೊಡ್ರಿಗಸ್,ಅನಿಲ್ ಪತ್ರಾವೊ, ಡೇವಿಡ್ ಡಿಸೋಜ, ಎ ಲ್ರೊ ಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ರೋಶನ್ ಡಿಸೋಜ, ವಿನ್ಸೆಂಟ್ ಲಸ್ರಾದೊ, ಸಿ.ಜಿ.ಪಿಂಟೊ, ಸುಶಾಂತ್ ಸಲ್ದಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ,ಫೆಲಿಕ್ಸ್ ಡಿಕ್ರೂಜ್, ಅಲ್ವಿನ್ ಪಿ.ಮೊಂತೆರೊ, ಶರ್ಮಿಳಾ ಮಿನೇಜಸ್, ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.