ಪುತ್ತೂರು, ಜು. 05 : ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತದ ದೈಹಿಕ ಸಂಪರ್ಕ ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿ ಶ್ರೀ ಕೃಷ್ಣ ಜೆ.ರಾವ್ ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಶ್ರೀಕೃಷ್ಣ ಜೆ.ರಾವ್ ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದನು. ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದರು. ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಮೈಸೂರು ಜಿಲ್ಲೆಯ ಟಿ ನರಸೀಪುರ ಪಟ್ಟಣದಲ್ಲಿ ಕೃಷ್ಣ ರಾವ್ ಅವರನ್ನು ಪತ್ತೆಹಚ್ಚಿ, ಜುಲೈ 4 ರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ. ನಂತರ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮಂಗಳೂರಿಗೆ ಕರೆದೊಯ್ಯಲಾಯಿತು.
ಆರೋಪಿಯನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ ಮತ್ತು ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.
ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಆಕೆಯನ್ನು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕರೆಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದನು. ಯುವತಿ ಗರ್ಭವತಿಯಾಗಿದ್ದು ಇತ್ತೀಚೆಗಷ್ಟೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಮಧ್ಯೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ಕೃಷ್ಣ ಜೆ.ರಾವ್ ಇದೀಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಸಂತ್ರಸ್ತೆ ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೊನೆಗೂ ಪ್ರಕರಣದ ಆರೋಪಿ ಕೃಷ್ಣ ಜೆ.ರಾವ್ ನನ್ನು ಪೊಲೀಸರು ಬಂಧಿಸಿದ್ದಾರೆ.