ಮಂಗಳೂರು,ಜುಲೈ, 26 : ಮೂಡುಬಿದಿರೆಯಲ್ಲಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸುವ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ 2025’ರ ಉದ್ಘಾಟನೆಯು ಆಗಸ್ಟ್ 1 ಮತ್ತು 2ರಂದು ವಿದ್ಯಾಗಿರಿಯಲ್ಲಿ ಬೆಳಿಗ್ಗೆ 9.30 ಕ್ಕೆ ನಡೆಯಲಿದ್ದು, ಸಚಿವ ದಿನೇಶ್ ಗುಂಡುರಾವ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಯಾಗಿ ಮಂಗಳೂರು ವಿವಿಯ ಕುಲಪತಿ ಡಾ ಪಿಎಲ್ ಧರ್ಮ ಪಾಲ್ಗೊಳ್ಳಲಿದ್ದು, ಶಾಸಕ ಉಮಾನಾಥ ಎ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಹಾಗೂ ವಿಧಾನ ಪರಿಷತ್ತಿನ ಚುನಾಯಿತ ಜನಪ್ರತಿನಿಧಿಗಳ ಉಪಸ್ಥಿತಿ ಇರಲಿದೆ ಎಂದರು.
ಈ ಸಂದರ್ಭದಲ್ಲಿ ಅಲ್‌ಕಾರ್ಗೋ ಲಾಜಿಸ್ಟಿಕ್ಸ್ನ ಅಧ್ಯಕ್ಷರಾದ ಶಶಿಕಿರಣ್ ಶೆಟ್ಟಿ, ದುಬೈನ ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಸೌದಿ ಅರೇಬಿಯದ ಎಕ್ಸಪರ್ಟೈಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆಎಸ್ ಶೇಖ್ ಕರ್ನಿರೆ, ಬಿಗ್ ಬ್ಯಾಗ್ಸ್ ಇಂಟರ್‌ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ನ ಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಶ್ ಕಾಮತ್, ರೋಹನ್ ಕಾರ್ಪೋರೇಶನ್ ಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹನ್ ಮೊಂತೇರೋ, ನೀವಿಯಸ್ ಸೊಲ್ಯೂಷನ್ಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಯೋಗ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಗುವುದು ಎಂದವರು ತಿಳಿಸಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಈ ಬಾರಿ 15ನೇ ಆವೃತ್ತಿಯದ್ದಾಗಿದ್ದು, ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಇಎಸ್, ಹೆಲ್ತ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಹಾಸ್ಪಿಟ್ಯಾಲಿಟಿ, ಮಾಧ್ಯಮ, ಟೆಲಿಕಾಂ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಉನ್ನತ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ನೇಮಕಾತಿ ನಡೆಸಲಿವೆ ಎಂದರು.
ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ. ಯಾವುದೇ ಕೋರ್ಸಗಳನ್ನು 2025ರ ಶೈಕ್ಷಣಿಕ ವರ್ಷದ ಮುಂಚೆ ಅಥವಾ ಒಳಗೆ ಪೂರ್ಣಗೊಳಿಸುವವರು ಹಾಗೂ ಅನುಭವವಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ತರಬೇತಿ ಹಾಗೂ ನಿಯೋಜನೆ ಮುಖ್ಯಸ್ಥ ರಂಜಿತಾ ಆಚಾರ್ಯ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.