ಮಂಗಳೂರು, ಆ.27 : ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಸಭೆ ನಡೆಯಿತು.ಸಭೆಯನ್ನು ಶಶಿಧರ ಶೆಟ್ಟಿ ಬರೋಡ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಅಧ್ಯಕ್ಷರಾಗಿ 25 ಕೋಟಿ ರೂಪಾಯಿಗೂ ಮಿಕ್ಕಿ ಪರಿಹಾರ ಧನವನ್ನು ಬಡವರಿಗೆ ವಿತರಿಸಿದ್ದಾರೆ. ಒಳ್ಳೆಯ ಕೆಲಸಗಳಿಂದ ಬಂಟ ಸಮಾಜ ಇತರ ಸಮಾಜಕ್ಕೆ ಮಾದರಿಯಾಗಬೇಕು ಎಂದು ಒಕ್ಕೂಟದ ವಿಶೇಷ ಮಹಾ ನಿರ್ದೇಶಕರು, ಬರೋಡ ಶಶಿ ಕ್ಯಾಟರಿಂಗ್ ನ ಮಾಲಕರಾದ ಶಶಿಧರ ಶೆಟ್ಟಿ ಬರೋಡ ತಿಳಿಸಿದರು.
ಒಕ್ಕೂಟದ ನಿರ್ದೇಶಕ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಮಾಜಪರ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಐಕಳ ಹರೀಶ್ ಶೆಟ್ಟಿಯವರ ಸಂಘಟನೆ ಮತ್ತು ಪದಾಧಿಕಾರಿಗಳ ಕೆಲಸ ಕಾರ್ಯಗಳಿಂದ ಒಕ್ಕೂಟ ಹಲವು ಕೋಟಿ ರೂ.ಗಳನ್ನು ಬಡವರ ವಿವಿಧ ಕಾರ್ಯಗಳಿಗೆ ವಿನಿಯೋಗಿಸಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡುತ್ತಾ, ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜಬಾಂಧವರ ವೈದ್ಯಕೀಯ ಚಿಕಿತ್ಸೆಗೆ, ಮದುವೆಗೆ, ವಿದ್ಯಾಭ್ಯಾಸಕ್ಕೆ, ಮನೆ ರಿಪೇರಿಗೆ, ಕ್ರೀಡೆಗೆ, ಪ್ರತಿಭಾ ಪುರಸ್ಕಾರ ಹೀಗೆ ಹತ್ತಾರು ಸಮಾಜಮುಖಿ ಕಾರ್ಯಗಳಿಗೆ ಒಕ್ಕೂಟವು ಸಹಾಯಹಸ್ತವನ್ನು ನೀಡಿದೆ. ಸಮಾಜಮುಖಿ ಕೆಲಸಗಳಿಗೆ ಕಳೆದ ಏಳು ವರ್ಷಗಳಿಂದ ಒಕ್ಕೂಟದಿಂದ ಈ ವರೆಗೆ 30 ಕೋಟಿ ರೂಪಾಯಿಗೂ ಮಿಕ್ಕಿದ ಅನುದಾನವನ್ನು ವಿತರಿಸಲಾಗಿದೆ ಎಂದರು.
ಸಮಾರಂಭದಲ್ಲಿ ಪೋಷಕ ಸದಸ್ಯ ನವೀನ್ ಚಂದ್ರ ಶೆಟ್ಟಿ ಪಡುಬಿದ್ರೆ, ಐಕಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿದರು.ಉದ್ಯಮಿ ಒಕ್ಕೂಟದ ನಿರ್ದೇಶಕ ಹುಬ್ಬಳ್ಳಿ- ಧಾರಾವಾಡ ಬಂಟರ ಸಂಘದ ಅಧ್ಯಕ್ಷ ರಾಜೇಂದ್ರ ವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಹಿರಿಯಡ್ಕ ಬಂಟರ ಸಂಘದ ನೂತನ ಅಧ್ಯಕ್ಷ ರವೀಂದ್ರನಾಥ ಹೆಗ್ಡೆ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ ಚೇತನ್ ಶೆಟ್ಟಿ ಕೋವಾಡಿ, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಹರ್ಷ ಶೆಟ್ಟಿ, ಮೂಡಬಿದ್ರೆ ಯುವ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಯುವ ಸಮಿತಿಯ ಸಂಚಾಲಕ ಶಿಶಿರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಭೆಯಲ್ಲಿ ನಿರ್ದೇಶಕರಾದ ಶಶಿಧರ ಶೆಟ್ಟಿ ಇನ್ನಂಜೆ, ಇಂಜಿನಿಯರ್ ಗೋಪಾಲ ಭಟ್, ಸುಧಾಕರ ಶೆಟ್ಟಿ ಉತ್ರಿಂಜೆ ಬೆಹರಿನ್, ಸತೀಶ್ಚಂದ್ರ ಶೆಟ್ಟಿ ಅಕ್ಕುಂಜೆ, ಯುವ ವಿಭಾಗದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ, ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ ವಿವಿಧ ಅಧ್ಯಕ್ಷರು, ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ತ್ರೈಮಾಸಿಕ ಲೆಕ್ಕಪತ್ರಗಳ ಮಂಡನೆ, ವರದಿ ವಾಚನ, ಲೆಕ್ಕಪತ್ರಗಳಿಗೆ ಮಂಜೂರಾತಿ, ಫಲಾನುಭವಿಗಳಿಗೆ ನೀಡಲ್ಪಟ್ಟ ಆರ್ಥಿಕ ಸಹಾಯಧನಕ್ಕೆ ಮಂಜೂರಾತಿ ಪಡೆಯಲಾಯಿತು. 30 ನೇ ವಾರ್ಷಿಕ ಮಹಾಸಭೆಗೆ ದಿನ ನಿಗದಿಪಡಿಸಲಾಯಿತು. ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥಿಸಿದರು. ಗಿರೀಶ್ ಶೆಟ್ಟಿ ವಂದಿಸಿದರು. ಡಾ ಪ್ರಿಯಾ ಶೆಟ್ಟಿ, ಡಾ ಮಂಜುಳಾ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.











