ಮಂಗಳೂರು, ಆ.20 : ಆಗಸ್ಟ್ 21ರಂದು ಮಂಗಳೂರಿನಲ್ಲಿರುವ ರೆಡ್ ಕ್ರಾಸ್ ಪ್ರೇರಣಾ ಸಭಾಂಗಣದಲ್ಲಿ ಒಂದು ದಿನದ ಮೆಗಾ ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ ಸಮಾವೇಶ ಆಯೋಜಿಸಲಾಗಿದೆ ಎಂದು ನಿರ್ದೇಶಕ ಎಸ್.ಎಸ್.ನಾಯಕ್ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.21ರಂದು ಬೆಳಗ್ಗೆ 9.15ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಉಡುಪಿ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸಮ್ಮುಖದಲ್ಲಿ ಸಾಧಕ ಎಂಎಸ್ಎಂಇ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಸಮಾವೇಶದಲ್ಲಿ ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ಗಳು, ಸಿಬಿಲ್ ಸ್ಕೋರ್, ಸರ್ಕಾರಿ ಸಬ್ಸಿಡಿ, ಬ್ಯಾಂಕ್ ಸಾಲ ಸೌಲಭ್ಯ, ಮೀನುಗಾರಿಕೆ, ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಹಾಗೂ ಆಹಾರ ಸಂಸ್ಕರಣೆ ಕುರಿತು ತಜ್ಞರಿಂದ ವಿಶೇಷ ಅಧಿವೇಶನಗಳು ನಡೆಯಲಿವೆ ಎಂದು ತಿಳಿಸಿದರು.
ತಂತ್ರಜ್ಞಾನ, ವ್ಯಾಪಾರ, ಇ-ಕಾಮರ್ಸ್, ಪ್ರವಾಸೋದ್ಯಮ, ಉತ್ಪಾದನೆ, ಸೇವೆ ಹಾಗೂ ಆರೋಗ್ಯ ಕ್ಷೇತ್ರಗಳ ಎಂಎಸ್ಎಂಇ ಮತ್ತು ನವೋದ್ಯಮಗಳಿಗೆ ಉತ್ತೇಜನ ನೀಡಲು ಉದ್ಯಮಿಗಳು, ಹೂಡಿಕೆದಾರರು, ಕೈಗಾರಿಕಾ ಮುಖಂಡರು, ನೀತಿ ನಿರೂಪಕರು ಹಾಗೂ ಪರಿಸರ ವ್ಯವಸ್ಥೆಯ ಪಾಲುದಾರರನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಸಮಾವೇಶದ್ದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಡಾ.ಪಿ.ಜಿ. ಮಹೇಶ್, ಡಾ.ದೇವದಾಸ್, ಜಾಕ್ಸನ್ ಸಲ್ಡಾನ, ರೊ.ರವೀಂದ್ರ ಬಿ.ಎನ್., ರೊ. ರೊ.ಡ್ಯಾರಿಲ್ ಡಿಸೋಜ ಹಾಗೂ ಸತೀಶ್ ಮಾಬೆನ್ ಉಪಸ್ಥಿತರಿದ್ದರು.











