ಮಂಗಳೂರು, ಆ.21 : ತುಳು ಭಾಷೆ, ಸಾಹಿತ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಡಿಜಿಟಲ್ ಜಗತ್ತಿನಲ್ಲಿ ದಾಖಲಿಸುವ ಪ್ರಯತ್ನವಾದ ತುಳು ವಿಕಿ ಪೀಡಿಯಾ ತನ್ನ ಲೈವ್ ಆವೃತ್ತಿಯ 10 ವರ್ಷಗಳನ್ನು ಪೂರೈಸಿದೆ. ಈ ದಶಮಾನೋತ್ಸವದ ಸ್ಮರಣೆ ಹಾಗೂ ಮುಂದಿನ ಹಂತದ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಸೆ.12 ಮತ್ತು 13ರದು ಮಂಗಳೂರಿನಲ್ಲಿ ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ ಗ್ರೂಪ್ನಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ಸ್ ಗ್ರೂಪ್ನ ಅಧ್ಯಕ್ಷ ಡಾ. ವಿಶ್ವನಾಥ ಬದಿಕಾನ ಅವರು ಶನಿವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.12ರಂದು ಬೆಳಗ್ಗೆ 10 ಗಂಟೆಗೆ ಕರಂಗಲ್ಪಾಡಿಯ ಎಜೆ ಗ್ರಾಂಡ್ ಹೊಟೇಲ್ನಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವ ಗಣಕತಜ್ಞ ಡಾ. ಕೆ.ಪಿ.ರಾವ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಳು ವಿಕಿಪೀಡಿಯಾದ 10 ವರ್ಷಗಳ ಪಯಣವನ್ನು ಅವಲೋಕಿಸುವುದು, ಆರಂಭಿಕ ಕೊಡುಗೆದಾರರು ಮತ್ತು ಸ್ವಯಂ ಸೇವಕರ ಸೇವೆ ಗುರುತಿಸುವುದು, ತುಳು ಭಾಷೆಯ ಡಿಜಿಟಲ್ ಭವಿಷ್ಯದ ಕುರಿತು ಚರ್ಚೆ ಹಾಗೂ ಮುಂದಿನ ಯೋಜನೆಗಳನ್ನು ರೂಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಅವರು ಹೇಳಿದರು.
ಆರಂಭಿಕ ದಿನಗಳಲ್ಲಿ ತುಳು ವಿಕಿಪೀಡಿಯಾದಲ್ಲಿ ಭೂತಾರಾಧನೆ, ಜನಪದ ಕಲೆ, ಆಚರಣೆಗಳು, ಸಾಂಪ್ರದಾಯಿಕ ಕ್ರೀಡೆಗಳು ಮತ್ತು ತುಳುನಾಡಿನ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇಂದು ವ್ಯಕ್ತಿಗಳು, ಗ್ರಾಮಗಳು, ತಾಲೂಕು, ಸಂಸ್ಥೆ, ಭೌಗೋಳಿಕ ಮಾಹಿತಿ, ಆಹಾರ ಸಂಸ್ಕೃತಿ, ಕಲಾವಿದರು, ಚಲನಚಿತ್ರಗಳು, ಪ್ರಕೃತಿ, ಔಷಧೀಯ ಸಸ್ಯಗಳು ಸೇರಿದಂತೆ ಹಲವು ಕ್ಷೇತ್ರಗಳ ಮಾಹಿತಿಯನ್ನು ದಾಖಲಿಸಲಾಗುತ್ತಿದೆ. ಸ್ಥಳೀಯವಾಗಿ ಲಭ್ಯವಿರುವ ಜ್ಞಾನವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ಮೂಲಕ ಮುಂದಿನ ಪೀಳಿಗೆಗೆ ಮಾಹತಿಯನ್ನು ಉಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಕರಾವಳಿ ವಿಕಿ ಮೀಡಿಯನ್ಸ್ ಯೂಸರ್ ಗ್ರೂಪ್ ಸ್ಥಾಪನೆ ಬಳಿಕ ಕಾಲೇಜುಗಳು, ವಿವಿಧ ಸಂಸ್ಥೆಗಳಲ್ಲಿ ಸಂಪಾದನಾ ಕಾರ್ಯಗಾರಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿಕಿಪೀಡಿಯಾ ಪರಿಚಯ, ಉಲ್ಲೇಖಗಳ ಬಳಕೆ, ಲೇಕನ ರಚನೆ, ಮಾಹಿತಿ ಸಂಗ್ರಹ, ಛಾಯಾಚಿತ್ರ ದಾಖಲಾತಿ ಮೊದಲಾದ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಶಮಾನೋತ್ಸವ ಕಾರ್ಯಕ್ರಮ ಸಂಘಟಕ ಆಶಯ್ ವಿ.ಬಿ., ಭರತ್ ಅಲಸಂಡೆಮಜಲು ಉಪಸ್ಥಿತರಿದ್ದರು.











