ಬೆಂಗಳೂರು, ಜ.26 : ಎರಡು ಹೊಸ ಧಾರಾವಾಹಿಗಳನ್ನು ಕಲರ್ಸ್ ವಾಹಿನಿಯಲ್ಲಿ ನಿಮ್ಮ ಮುಂದೆ ತರಲು ಸಜ್ಜಾಗಿದೆ. ‘ವಧು’ ಮತ್ತು ‘ಯಜಮಾನ’ ದೈನಿಕ ಧಾರಾವಾಹಿಗಳು ಜ. 27 ರಂದು ಪ್ರಸಾರವಾಗಲಿವೆ. ಜೋಡಿ ಕತೆಗಳಾದ ಡಿವೋರ್ಸ್ ಲಾಯರ್ ಮದುವೆ ಕತೆ ‘ವಧು’ ರಾತ್ರಿ 9.30 ಕ್ಕೆ ಪ್ರಸಾರ ಆಗಲಿದೆ. ಕಾಂಟ್ರಾಕ್ಟ್ ಮದುವೆ ಕತೆ ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರ ಆಗಲಿದೆ.
ವಧು ಧಾರಾವಾಹಿಯಲ್ಲಿ ವಧು ಒಬ್ಬ ಅವಿವಾಹಿತೆ, ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ವಧು ಮನುಷ್ಯ ಸಂಬಂಧಗಳನ್ನು ಪ್ರೀತಿಸುವ ಮತ್ತು ಗೌರವಿಸುವ ಕಥೆ ಈ ಧಾರಾವಾಹಿಯಲ್ಲಿದೆ. ಸಾರ್ಥಕ್ ಪಾತ್ರದಲ್ಲಿ ಲಕ್ಷಣ ಧಾರಾವಾಹಿಯ ಅಭಿಷೇಕ್ ಶ್ರೀಕಾಂತ್, ವಧು ಪಾತ್ರದಲ್ಲಿ ದುರ್ಗಾಶ್ರೀ ಮತ್ತು ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ನಟಿಸಲಿದ್ದಾರೆ. ಹೆಸರಾಂತ ಕಲಾವಿದರಾದ ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಅವರು ಅಭಿನಹಿಸಿದ್ದಾರೆ.
ಯಜಮಾನ ಧಾರಾವಾಹಿಯಲ್ಲಿ ರಘು ಒಬ್ಬ ಸ್ವಾರ್ಥವಿಲ್ಲದ ಸರಳ ವ್ಯಕ್ತಿ, ಇವರಿಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹಾದಾಸೆ. ಝಾನ್ಸಿ ತಾತನ ಮಡಿಲಲ್ಲಿ ಬೆಳೆದವಳು. ಇವಳು ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ. ವಿಧಿ ಇವರಿಬ್ಬರನ್ನೂ ಒಂದು ಮದುವೆಯ ರೂಪದಲ್ಲಿ ಹತ್ತಿರ ತರುತ್ತದೆ. ತನ್ನ ಕಷ್ಟದಲ್ಲಿರುವ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ರಘು ಮದುವೆಗೆ ಒಪ್ಪುತ್ತಾನೆ. ರಘು ಮತ್ತು ಝಾನ್ಸಿ ತಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಯನ್ನು ಎದುರಿಸಬೇಕಾಗುತ್ತದೆ. ಅನುಕೂಲಕ್ಕೆಂದು ಆರಂಭವಾದ ಅವರಿಬ್ಬರ ಸಂಬಂಧ ಈಗ ಗಾಢವಾಗುತ್ತಾ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯವನ್ನೂ ಹುಟ್ಟಿಸುತ್ತದೆ.
ಧಾರಾವಾಹಿಯಲ್ಲಿ ಹೊಸ ಮುಖಗಳಾದ ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ‘ಯಜಮಾನ’ದ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್ ಮತ್ತು ವಿಶ್ವ ಅವರು ಅಭಿನಹಿಸಿದ್ದಾರೆ.