ಕಾಪು, ಮೇ. 12 : ವಿವಾಹ ಸಮಾರಂಭದ ವೇಳೆ ದೇವಾಲಯದ ಕೆರೆಯಲ್ಲಿ ಬಾಲಕನೊಬ್ಬ ಮುಳುಗಿ ಸಾವನ್ನಪ್ಪಿದ ಘಟನೆ ನಂದಿಕೂರಿನಲ್ಲಿ ಮೇ 11ರಂದು ನಡೆದಿದೆ.
ಮೃತಮಗುವನ್ನು ಕಾಪು ಕುರ್ಕಾಲು ಗ್ರಾಮದ ನಿವಾಸಿಗಳಾದ ಸತ್ಯನಾರಾಯಣ ಮತ್ತು ಸೌಮ್ಯ ಅವರ ಪುತ್ರ ವಾಸುದೇವ (4) ಎಂದು ಗುರುತಿಸಲಾಗಿದೆ.
ಸತ್ಯನಾರಾಯಣ ಅವರ ಕುಟುಂಬವು ನಂದಿಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿವಾಹಕ್ಕೆ ಹಾಜರಾಗಿತ್ತು. ಮಧ್ಯಾಹ್ನ ಮಗುವಿಗೆ ಊಟ ಮಾಡಿಸಿದ ನಂತರ ಸೌಮ್ಯ ಅವರು ಕೈ ತೊಳೆಯಲು ಹೊರಗೆ ಹೋಗಿ ಹಿಂತಿರುಗಿದಾಗ, ವಾಸುದೇವ ಕಾಣೆಯಾಗಿದ್ದ. ತಕ್ಷಣ ಸಭಾಂಗಣದಲ್ಲಿದ್ದ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಹುಡುಕಾಟ ನಡೆಸಿದಾಗ ವಾಸುದೇವನ ದೇಹವು ಪಕ್ಕದಲ್ಲಿದ್ದ ದೇವಾಲಯದ ಕೆರೆಯಲ್ಲಿ ತೇಲುತ್ತಿರುವುದು ಕಂಡುಬಂದಿತು.ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.