ಉಡುಪಿ, ಮೇ. 13 : ನಾಯಿ ಅಡ್ಡ ಬಂದು ಬೈಕ್ ರಸ್ತೆ ಬದಿಯ ಮೈಲಿಗಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.
ಮೃತರನ್ನು ತೆಂಕ ಎರ್ಮಾಳು ನಿವಾಸಿ ಅಬ್ದುಲ್ ಅಜೀಜ್ ಅವರ ಪುತ್ರ ಶೇಖ್ ಅಬ್ದುಲ್ ಸೈಫಾನ್ ಎಂದು ಗುರುತಿಸಲಾಗಿದೆ.
ತಂದೆ ಮತ್ತು ಮಗ ಪಡುಬಿದ್ರಿಯಲ್ಲಿ ಪುಸ್ತಕಗಳನ್ನು ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಇದ್ದಕ್ಕಿದ್ದಂತೆ ನಾಯಿಯೊಂದು ರಸ್ತೆಗೆ ಅಡ್ಡ ಬಂದ ಕಾರಣ ಬೈಕ್ ನಿಯಂತ್ರಣ ತಪ್ಪಿ ಹೆದ್ದಾರಿಯ ಬದಿಯಲ್ಲಿದ್ದ ಮೈಲಿಗಲ್ಲಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ರಸ್ತೆಗೆ ಬಿದ್ದ ಪರಿಣಾಮ ಸೈಫಾನ್ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.