ಉಡುಪಿ, ಮೇ. 15 : ನೂತನವಾಗಿ ನಿರ್ಮಿಸಲಾದ ಸಾಯಿರಾಧ ಗ್ರೂಪ್ ನ ಕಾರ್ಪೊರೇಟ್ ಕಚೇರಿ ಶಿರಿಬೀಡುವಿನ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಗುರವಾರ ಉದ್ಘಾಟನೆಗೊಂಡಿತು.
ಬಾರ್ಕೂರು ಮಹಾ ಸಂಸ್ಥಾನದ ಪೀಠಾಪತಿ ಶ್ರೀ ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷ ಭಾರತೀ ಸ್ವಾಮೀಜಿ ಅವರು ರಿಬ್ಬನ್ ತುಂಡರಿಸುವ ಮೂಲಕ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಮನೋಹರ್ ಎಸ್. ಶೆಟ್ಟಿ ನೇತೃತ್ವದ ಸಾಯಿರಾಧಾ ಗ್ರೂಪ್ ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿದ್ದು, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಾ ಉತ್ತಮ ಸಂಸ್ಥೆಯಾಗಿ ಬೆಳೆದಿದೆ. ಸಾಯಿರಾಧಾ ಗ್ರೂಪ್ನ ಕಾರ್ಪೊರೇಟ್ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆಯನ್ನು ನೀಡಲಿ ಎಂದು ಶುಭಹಾರೈಸಿದರು.
ಬಳಿಕ ಟಿ ಎಂ ಎ ಪೈ ಫೌಂಡೆಶನ್ ನ ಅಧ್ಯಕ್ಷರಾದ ಟಿ ಅಶೋಕ್ ಪೈ ಮಾತನಾಡಿ, ಮನೋಹರ ಶೆಟ್ಟಿಯವರು ಸಮಾಜದಲ್ಲಿ ಸಾಯಿರಾಧ ಎನ್ನುವ ಸಂಸ್ಥೆಯನ್ನು ನಿರ್ಮಿಸಿ ಹಲವಾರು ಜನರಿಗೆ ಉದ್ಯೋಗವನ್ನು ನೀಡಿದವರಾಗಿದ್ದಾರೆ. ಹಲವಾರು ಸಂಸ್ಥೆಯನ್ನು ನಿರ್ಮಿಸಿ ಅಭಿವೃದ್ಧಿಯನ್ನು ಹೊಂದಿದ ಸಂಸ್ಥೆ ಇದಾಗಿದೆ ಎಂದು ಹೇಳಿದರು.
ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಮನೋಹರ್ ಎಸ್. ಶೆಟ್ಟಿ ಕಟ್ಟಡ ನಿರ್ಮಾಣ, ಪ್ರವಾಸೋದ್ಯಮ, ಮೆಡಿಕಲ್ ಕ್ಷೇತ್ರ ಸಹಿತ ನಾನಾ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದ್ದು, ಯಶಸ್ಸು ಕಂಡಿದ್ದಾರೆ. ಈ ಸಂಸ್ಥೆ ಇನ್ನಷ್ಟು ಬೆಳೆದು ಹೆಚ್ಚಿನ ಮಂದಿಗೆ ಉದ್ಯೋಗ ನೀಡಲಿ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಿಭಾಗದ ವಲಯಾಧ್ಯಕ್ಷದ ಮುಖ್ಯ ಪ್ರಬಂಧಕರಾದ ರಾಜೇಶ್ ಖನ್ನಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಇದರ ಸಹಾಯಕ ಮುಖ್ಯ ಪ್ರಬಂಧಕಿ ಸುರೇಖಾ ಎನ್. , ಉಡುಪಿ ಜಿಲ್ಲಾ ಸಹಕಾರಿ ಒಕ್ಕೂಟ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಸಾಯಿರಾಧ ಗ್ರೂಪ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮನೋಹರ ಶೆಟ್ಟಿ, ಮಕ್ಕಳು ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ಎಮ್ ಶೆಟ್ಟಿ , ಶರಣಂ ಎಮ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ ಸೊರಕೆ, ಗಣ್ಯರಾದ ಮಣಿಪಾಲ ಪ್ರೊ ಚಾನ್ಸಲರ್ ಡಾ ಎಚ್ ಎಸ್ ಬಲ್ಲಾಳ್, ಉದ್ಯಮಿ ಪುರುಷೋತ್ತಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.