ಬಂಟ್ವಾಳ, ಮೇ. 29 : ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮೇ 27ರಂದು ಅಬ್ದುಲ್ ರಹಿಮಾನ್ ಎಂಬವರ ಕೊಲೆ ಮತ್ತು ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ತನಿಖಾ ತಂಡವು ಗುರುವಾರ ಬಂಟ್ವಾಳ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದೀಪಕ್ ಪೂಜಾರಿ(21), ಅಮ್ಮುಂಜೆ ಗ್ರಾಮದ ಪೃಥ್ವಿರಾಜ್ ಜೋಗಿ(21) ಹಾಗೂ ಅಮ್ಮುಂಜೆ ಗ್ರಾಮದ ಚಿಂತನ್ ಬೆಳ್ಚಡ(19) ಬಂಧಿತ ಆರೋಪಿಗಳು.
ಆರೋಪಿಗಳ ಪತ್ತೆಗಾಗಿ 5 ಪೊಲೀಸರ ತನಿಖಾ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗಿರುತ್ತದೆ.ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯವು ಪ್ರಗತಿಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.