ಮಂಗಳೂರು, ನ.26 : ಶ್ರೀ ವಾರಾಹಿ ಫಿಲ್ಮ್ಸ್ ಲಾಂಛನದಲ್ಲಿ ತಯಾರಾದ ಸಂತೋಷ್ ವಿ ನಿರ್ಮಾಣದ ಚಯನ್ ಶೆಟ್ಟಿ ನಿರ್ದೇಶನದ “ಮ್ಯಾರೇಜ್ ಪಾರ್ಟಿ” ಚಿತ್ರ ಡಿಸೆಂಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಿರ್ದೇಶಕ ಚಯನ್ ಶೆಟ್ಟಿ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ಕಲಾವಿದರನ್ನು ಸೇರಿಸಿ ಚಿತ್ರ ತಯಾರಾಗಿದೆ. ಡಿಸೆಂಬರ್ 4 ರಂದು ಕನ್ನಡ ಭಾಷೆಯಲ್ಲಿ ತೆರೆಗೆ ಬರಲಿದೆ ನಂತರ ಮಲಯಾಳಂ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದರು.
ನವೀನ್ ಪಡೀಲ್ ಅವರು ಮಾತನಾಡಿ ಚಿತ್ರದಲ್ಲಿ ಹಾರರ್, ಹಾಸ್ಯ ಇದೆ. ಪ್ರೇಕ್ಷಕರು ಕಲಾವಿದರನ್ನು ಬೆಳೆಸಿದಾಗ ಕಲಾವಿದರು ಉಳಿಯುತ್ತಾರೆ ಎಂದು ತಿಳಿಸಿದರು.
ನಿರ್ಮಾಪಕ ಸಂತೋಷ್ ವಿ ಅವರು ಮಾತನಾಡಿ ಚಯನ್ ಶೆಟ್ಟಿ ಅವರ ನಿರ್ದೇಶನದ ಈ ಚಿತ್ರದಲ್ಲಿ ಒಳ್ಳೆಯ ಕಂಟೆಂಟ್ ಇದೆ. ಜೊತೆಗೆ ಸಿನಿಮಾ ಚಿತ್ರೀಕರಣದ ವೇಳೆ ಕಲಾವಿದರ ಪ್ರೋತ್ಸಾಹವೂ ದೊರೆಯಿತು ಎಂದರು.
ನಾಯಕ ನಟ ವಿನೀತ್ ಕುಮಾರ್ ಅವರು ಮಾತನಾಡಿ ಈ ಸಿನಿಮಾ ಕರಾವಳಿ ಭಾಗದ ಕಥೆಯನ್ನು ಒಳಗೊಂಡಿದೆ.ಕಾಡಿನ ಮಧ್ಯೆ ಚಿತ್ರೀಕರಣ ನಡೆದಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ವಿನೀತ್ ಕುಮಾರ್, ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾನಾಜೆ, ಪುಷ್ಪರಾಜ್ ಬೋಳಾರ್, ಜ್ಯೋತಿಶ್ ಶೆಟ್ಟಿ, ಅನನ್ಯ ಹಾಗೂ ರಕ್ಷಿತಾ ಪೂಜಾರಿ ಸೇರಿದಂತೆ ಕರಾವಳಿ ಭಾಗದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂದರು.
ಚಯನ್ ಶೆಟ್ಟಿ ಅವರು ಮ್ಯಾರೇಜ್ ಪಾರ್ಟಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಉದ್ಯಮಿ ಸಂತೋಷ್ ವಿ ಯವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರಕ್ಕೆ ನಿತೀನ್ ಶೆಟ್ಟಿ ಸಂಕಲನ, ಶ್ರೀಕಾಂತ್ ಕ್ಯಾಮೆರಾ ವರ್ಕ್, ಹಾಗೂ ರಿತ್ವಿಕ್ ಮುರಳೀಧರ ಸಂಗೀತ ಇದೆ, ಪ್ರಮೋದ್ ಮರವಂತೆ ಹಾಗೂ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಇದೆ ಈ ಸಿನಿಮಾ ವನ್ನು ಎಂಪಿ ಫಿಲಂಸ್ ಮೂಲಕ ಮುನಿದ್ರಾ ಅವರು ವಿತರಣೆ ಮಾಡಲಿದ್ದಾರೆ. ಮ್ಯಾರೇಜ್ ಪಾರ್ಟಿ ಚಿತ್ರದ ಪ್ರೀಮಿಯರ್ ಶೋ ಮಂಗಳೂರಿನಲ್ಲಿ ನವಂಬರ್ 29 ರಂದು ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿಷ್ ಶೆಟ್ಟಿ, ಕಾರ್ತಿಕ್ ರಾವ್, ಅನನ್ಯ, ರಕ್ಚಿತಾ ಪೂಜಾರಿ, ಭೀಮರಾವ್, ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.











