ಮಂಗಳೂರು, ಜು. 08 : ಅಲ್ ಮದೀನಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದೀಕ್ ಪಾಂಡವರಕಲ್ಲು ಎಂಬಾತ ಮುಸ್ಲಿಂ ಸಮುದಾಯದ ಯುವತಿಯರಿಗೆ ಮದುವೆ ಮಾಡಿಸುವ ನೆಪದಲ್ಲಿ ಕ್ರೌಡ್ ಫಂಡ್ ಸಂಗ್ರಹ ಮಾಡುವುದಲ್ಲದೆ ಯುವತಿಯರ ಮೊಬೈಲ್ ನಂಬರ್ ಪಡೆದು, ತನ್ನ ಆನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾನೆ. ಯುವತಿಯರಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದಕ್ಕೆ ಸಿದ್ದೀಕ್ ಪಾಂಡವರಕಲ್ಲು ಎಂಬವರು ನನ್ನ ವಿರುದ್ಧ ಸುಳ್ಳುಕೇಸು ದಾಖಲಿಸಿರುವುದಾಗಿ ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಯ ಸ್ಥಾಪಕ ಅಬ್ದುಲ್ ರವೂಫ್ ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ದಿ ವಾಯ್ಸ್ ಆಪ್ ಬ್ಲಡ್ ಡೋನರ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ವಿವಿಧ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ದಾಖಲೆಯ ಮಟ್ಟದಲ್ಲಿ ರಕ್ತದಾನ ಮಾಡಿದ್ದೇನೆ. ವಿಕಲಚೇತನರಿಗೆ ವೀಲ್ ಚೇರ್ ಮುಂತಾದ ಪರಿಕರಗಳನ್ನು ನೀಡುತ್ತಾ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.
ಸಿದ್ದೀಕ್ ಪಾಂಡವರಕಲ್ಲು ಮುಸ್ಲಿಂ ಸಮುದಾಯದ ಅಮಾಯಕ ಯುವತಿಯರನ್ನು ತನ್ನ ತೀಟೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಮತ್ತು ಬಡ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸುವುದಾಗಿ ಹಣ ಸಂಗ್ರಹಿಸಿದ್ದ. ಬಂದ ಹಣದಲ್ಲಿ ಮುಕ್ಕಾಲು ಪಾಲು ತಾನು ಇಟ್ಟುಕೊಂಡು ಬಾಕಿ ಉಳಿದ ಭಾಗವನ್ನು ಮಾತ್ರ ಬಡ ಕುಟುಂಬಕ್ಕೆ ನೀಡುತ್ತಿದ್ದ. ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವ ನೀಚ ಕೃತ್ಯಕ್ಕೂ ಸಿದ್ದೀಕ್ ಪಾಂಡವರಕಲ್ಲು ಇಳಿಯುತ್ತಿದ್ದ. ಈತ ಸಮಾಜಕ್ಕೊಂದು ಪಿಡುಗಾಗಿ ಪರಿಣಮಿಸಿದ್ದಾನೆ. ಆದುದರಿಂದ ನಾನು ಪ್ರಾಮಾಣಿಕವಾಗಿ ವಿಚಾರಿಸಿದ್ದ ಮಾತ್ರಕ್ಕೆ ನನ್ನ ವಿರುದ್ಧ ಕೇಸು ದಾಖಲಿಸಿದ್ದಾನೆ ಎಂದು ರವೂಫ್ ತಿಳಿಸಿದರು..
ಪತ್ರಿಕಾಗೋಷ್ಠಿಯಲ್ಲಿ ದ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಉಪಾಧ್ಯಕ್ಷ ಸಾದಿಕ್ ಸಾಲೆತ್ತೂರು, ಕಾರ್ಯದರ್ಶಿ ರುಬಿಯಾ ಅಕ್ತರ್ ಉಪಸ್ಥಿತರಿದ್ದರು..