ಮಂಗಳೂರು, ಜು. 09 : ಅದ್ರಿ ಸ್ಟಾರ್ ಫಿಲಂಸ್ ಅರ್ಪಿಸುವ ಸಾನ್ವಿಕ ಅವರ ನಿರ್ದೇಶನದ “ಜಾವ ಕಾಫಿ” ಕನ್ನಡ ಚಿತ್ರ ಜು. 11 ರಂದು ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕಿ, ನಾಯಕಿ, ನಿರ್ದೇಶಕಿ ಸಾನ್ವಿಕ ಅವರು ಮಂಗಳವಾರ ಪತ್ರಿಕಾಭನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼಜಾವ ಕಾಫಿʼ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಬೆಂಗಳೂರು, ಮಂಗಳೂರು, ಕೇರಳ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಅಜಯ್ ವರ್ಧನ್ ನಾಯಕರಾಗಿ, ಸಾನ್ವಿಕ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಮಂಜುನಾಥ್, ಪ್ರತಿಮ, ಭವಾನಿ ಶಂಕರ್, ವಿಜಯ್ ಕುಮಾರ್, ರಾಮಚಂದ್ರ, ರಾಮಲಿಂಗಪ್ಪ ನಟಿಸಿದ್ದಾರೆ. ಧ್ರುವ ದೇವರಾಯನ್ ಹಿನ್ನೆಲೆ ಸಂಗೀತ, ನೃತ್ಯ ನಿರ್ದೇಶಕರಾಗಿ ಪಾಲಾಶ್ ಮಾಸ್ಟರ್, ಶ್ರೀಧರ್ ಕರ್ಕೇರ ಸಂಗೀತ ನೀಡಿದ್ದಾರೆ ಎಂದು ತಿಳಿಸಿದರು.
ನಾಯಕ ನಟ ಅಜಯ್ ವರ್ಧನ್ ಮಾತನಾಡಿ, ಈಗಾಗಲೇ ತುಳು ಚಿತ್ರದಲ್ಲಿ ನಟಿಸಿರುವ ನನಗೆ ಇದು ಮೂರನೇ ಚಿತ್ರ. ಸಾನ್ವಿಕ ಅವರು ಒಂದೊಳ್ಳೆ ಚಿತ್ರ ಮಾಡಿದ್ದಾರೆ. ನಾನು ಪತ್ರಕರ್ತನ ಪಾತ್ರ ಮಾಡಿದ್ದೇನೆ ಎಂದು ಹೇಳಿದರು.
ಕೇರಳ ರಾಜ್ಯದವರಾದ ಸಾನ್ವಿಕ ಅವರ ನಿರ್ದೇಶನದ ಮೊದಲ ಚಿತ್ರವಿದು. ನಿರ್ದೇಶನ ಮಾತ್ರ ಅಲ್ಲ. ನಿರ್ಮಾಪಕಿ, ನಿರ್ದೇಶಕಿ ,ನಾಯಕಿ, ಸಾಹಸ ಹೀಗೆ ಒಂಭತ್ತು ಆಯಾಮಾಗಳಲ್ಲಿ ಸಾನ್ವಿಕ ಕೆಲಸ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ, ನಾಯಕಿ, ನಿರ್ದೇಶಕಿ ಸಾನ್ವಿಕ, ನಾಯಕ ನಟ ಅಜಯ್ ವರ್ಧನ್ ಮೊದಲಾದವರು ಉಪಸ್ಥಿತರಿದ್ದರು.