ಮಂಗಳೂರು, ಜು. 15 : ಇತ್ತೀಚೆಗೆ ರಾಜ್ಯದ ಯುವ ಜನರಲ್ಲಿ ಹೃದಯಾಘಾತದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಈ ಬಗ್ಗೆ ಜಾಗೃತಿ,ಮುನ್ನೆಚ್ಚರಿಕೆ ಮತ್ತು ತಪಾಸಣೆ ಅಗತ್ಯ ಎಂದು ಹೃದಯ ತಜ್ಞ, ಮಂಗಳೂರು ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಅವರು ಸೋಮವಾರ ಪತ್ರಿಕಾಭನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬದಲಾದ ಜೀವನ ಪದ್ಧತಿಯಿಂದಾಗಿ ಯುವ ಸಮುದಾಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಫಾಸ್ಟ್ ಫುಡ್ ಸೇವನೆಯು ತೀವ್ರವಾಗಿ ಹೆಚ್ಚಾಗಿದ್ದು, ಇದರಲ್ಲಿ, ಕೃತಕ ಪದಾರ್ಥಗಳು ಇದ್ದು ಆರೋಗ್ಯಕ್ಕೆ ಹಾನಿಕಾರಕವಾಗುತ್ತವೆ. ಮನೆಯ ಅಡುಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಅತಿಯಾದ ಎಣ್ಣೆ ಪದಾರ್ಥ ಸೇವನೆಯೂ ಕೂಡ ಅಪಾಯಕಾರಿ. ಮೀನು ಸೇವನೆ ಹೃದಯದ ಆರೋಗ್ಯಕ್ಕೆ ಸೂಕ್ತವಾಗಿದೆ. ದೈಹಿಕ ಚಟುವಟಿಕೆಗಳು, ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.ಶಾಲೆ ಕಾಲೇಜುಗಳಲ್ಲ ದೈಹಿಕ ಚಟುವಟಿಕೆಗಳಿಗೆ ಆಧ್ಯತೆ ನೀಡಬೇಕು ಎಂದವರು ಹೇಳಿದರು.
ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ, ಕೆಲಸದ ಒತ್ತಡ, ವೈಯಕ್ತಿಕ ಜೀವನದ ಉದ್ವಿಗ್ನತೆ, ಶುಗರ್, ರಕ್ತದೊತ್ತಡ, ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಕುಟುಂಬದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಎಚ್ಚರಿಕೆ ವಹಿಸಬೇಕು ಎಂದರು.